ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ನಡೆದ ಒಂದು ಘಟನೆಯಿಂದ ಮೊಹಮ್ಮದ್ ಶಮಿ(mohammed shami) ಇದೀಗ ಎಲ್ಲರ ಮನಗೆದ್ದಿದ್ದಾರೆ.
ಶುಕ್ರವಾರ ಆರಂಭವಾದ ಈ ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನದೊಳಗೆ ನುಸುಳಿದ್ದಾನೆ. ತಕ್ಷಣವೇ ಎಚ್ಚೆತ್ತ ಭದ್ರತಾ ಅಧಿಕಾರಿಗಳು ಆತನನ್ನು ಹಿಡಿದು ಮೈದಾನದಿಂದ ಹೊರಹಾಕಲು ಯತ್ನಿಸಿದ್ದಾರೆ. ಆತನ ಕಾಲು ಹಿಡಿದು ಮೈದಾನದಲ್ಲಿ ಎಳೆದಾಡಿದ್ದಾರೆ. ಇದೇ ವೇಳೆ ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ನಡೆಸುತ್ತಿದ್ದ ಮೊಹಮ್ಮದ್ ಶಮಿ ಭದ್ರತಾ ಸಿಬ್ಬಂದಿ ಬಳಿ ಬಂದು ಈ ರೀತಿಯಾಗಿ ಆತನಿಗೆ ತೊಂದರೆ ಕೊಡಬೇಡಿ ಸ್ವಲ್ಪ ಮೃದುವಾಗಿ ವರ್ತಿಸುವಂತೆ ಸಲಹೆ ನೀಡಿದ್ದಾರೆ. ಶಮಿಯ ಸಲಹೆ ಮೇರೆಗೆ ಅಧಿಕಾರಿಗಳು ಶಾಂತ ರೀತಿಯಲ್ಲಿ ವರ್ತಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IND VS AUS: ಮೊಹಮ್ಮದ್ ಸಿರಾಜ್ ಬೌನ್ಸರ್ಗೆ ತಿಣುಕಾಡಿದ ವಾರ್ನರ್, ಖವಾಜಾ; ವಿಡಿಯೊ ವೈರಲ್
ದೆಹಲಿಯಲ್ಲಿ ಸುಮಾರು ಆರು ವರ್ಷಗಳ ಬಳಿಕ ನಡೆಯುತ್ತಿರುವ ಪಂದ್ಯ ಇದಾಗಿದೆ. ಇದೇ ಜೋಶ್ನಲ್ಲಿ ಈ ಅಭಿಮಾನಿ ಕ್ರಿಕೆಟಿಗರತ್ತ ಓಡಿ ಬಂದಿದ್ದಾನೆ. ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ಹಿಡಿದರು. ಆಗ ಆತ ಮೈದಾನದಿಂದ ಹೊರಹೋಗಲು ನಿರಾಕರಿಸಿ ಮೈದಾನದಲ್ಲೇ ಕುಳಿತುಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಅಧಿಕಾರಿಗಳು ಆತನನ್ನು ಎಳೆಯಲು ಆರಂಭಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಯನ್ನು ಶಮಿ ಖಂಡಿಸುವ ಮೂಲಕ ಇದೀಗ ಎಲ್ಲರ ಮನ ಗೆದ್ದಿದ್ದಾರೆ. ಇನ್ನೂ ಶಮಿ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.