Site icon Vistara News

IND vs AUS: ವೈಟ್ ವಾಶ್ ತಪ್ಪಿಸಿಕೊಂಡ ಆಸೀಸ್; ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಸೋಲು

Mitchell Starc joined the wickets tally in the 36th over

ರಾಜ್​ಕೋಟ್​: ಪ್ರವಾಸಿ ಆಸ್ಟ್ರೇಲಿಯಾ(IND vs AUS) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ(India vs Australia, 3rd ODI) ಹಲವು ಪ್ರಯೋಗ ನಡೆಸಿ ಆಡಲಿಳಿದ ಭಾರತ ಸೋಲಿನ ಆಘಾತ ಎದುರಿಸಿದೆ. ಈ ಸೋಲಿನೊಂದಿಗೆ ತವರಿನಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಯಿತು. ಅಲ್ಲದೆ ಈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡವೇ ಗೆದ್ದು ಬೀಗಿದ ದಾಖಲೆ ಅಜೇಯವಾಗಿ ಮುಂದುವರಿದಿದೆ. ಇದಕ್ಕೂ ಮುನ್ನ ಇಲ್ಲಿ ನಡೆದ ಮೂರೂ ಏಕದಿನ ಪಂದ್ಯಗಳಲ್ಲಿಯೂ ಮೊದಲು ಬ್ಯಾಟಿಂಗ್​ ನಡೆಸಿದ್ದ ತಂಡವೇ ಗೆಲುವು ಸಾಧಿಸಿತ್ತು.

ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ(Saurashtra Cricket Association Stadium) ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸೀಸ್​ ಆರಂಭದಿಂದಲೇ ಭಾರತದ ಬೌಲರ್​ಗಳ ಮೇಲೆರಗಿ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 352 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದು ಆ ಬಳಿಕ ನಾಟಕೀಯ ಕುಸಿತ ಕಂಡು 49.4 ಓವರ್​ಗಳಲ್ಲಿ 286 ರನ್​ಗೆ ಸರ್ವಪತನ ಕಂಡು ಸೋಲನುಭವಿಸಿತು. ಆದರೆ ವಿಶ್ವಕಪ್​ಗೂ ಮುನ್ನ 2-1 ಅಂತರದಿಂದ ಸರಣಿ ಗೆದ್ದದ್ದು ಭಾರತದ ಸಾಧನೆಯಾಗಿದೆ.

ರೋಹಿತ್​-ಕೊಹ್ಲಿ ಉತ್ತಮ ಆಟ

ಶುಭಮನ್​ ಗಿಲ್​ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಭಾರತ ಈ ಪಂದ್ಯದಲ್ಲಿ ಕೆಲ ಪ್ರಯೋಗ ನಡೆಸಿ ವಾಷಿಂಗ್ಟನ್​ ಸುಂದರ್​ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿತು. ಆದರೆ ಈ ಯೋಜನೆ ಫ‌ಲಪ್ರದವಾಗಲಿಲ್ಲ. ಅವರು 18 ರನ್​ಗಳಿಸಿ ತಮ್ಮ ಮೇಲಿಟ್ಟ ಬರವಸೆಯನ್ನು ಹುಸಿಯಾಗಿಸಿದರು. ಆದರೆ ನಾಯಕ ರೋಹಿತ್​ ಮತ್ತು ವಿರಾಟ್​ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ ಆಸೀಸ್​ ಬೌಲರ್​ಗಳ ಬೆವರಿಳಿಸುವಲ್ಲಿ ಯಶಸ್ಸು ಕಂಡರು.

ನಾಟಕೀಯ ಕುಸಿತ ಕಂಡ ಭಾರತ

ಆರಂಭದಿಂದಲೇ ಸಿಕ್ಸರ್​ ಬೌಂಡರಿ ಬಾರಿಸಿದ ರೋಹಿತ್​ ಶರ್ಮ ಅವರು ಸುಂದರ್​ ಜತೆ ಮೊದಲ ವಿಕೆಟ್​ಗೆ 74 ರನ್​ ಒಟ್ಟುಗೂಡಿಸಿದರು. ಇದರಲ್ಲಿ ಬಹುಪಾಲು ಮೊತ್ತ ರೋಹಿತ್​ ಅವರದ್ದೇ ಆಗಿತ್ತು. ಆ ಬಳಿಕ ವಿರಾಟ್​ ಕೊಹ್ಲಿ ಜತೆ ಸೇರಿಕೊಂಡು ದ್ವಿತೀಯ ವಿಕೆಟ್​ಗೆ 70 ರನ್​ ರಾಶಿ ಹಾಕಿದರು. 6 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿದ ರೋಹಿತ್​ 81 ರನ್​ ಗಳಿಸಿ ಮ್ಯಾಕ್ಸ್​ವೆಲ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ವಿಕೆಟ್​ ಬಿದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿಯ ವಿಕೆಟ್​ ಕೂಡ ಬಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಭಾರತ, ಉಭಯ ಆಟಗಾರರ ವಿಕೆಟ್​ ಬಿದ್ದೊಡನೆ ನಾಟಕೀಯ ಕುಸಿತ ಕಂಡು ಸೋಲು ಕಂಡಿತು. ವಿರಾಟ್​ 61 ಎಸೆತ ಎದುರಿಸಿ 56 ರನ್​ ಗಳಿಸಿದರು. ಮೊದಲ ಮೂರು ವಿಕೆಟ್​ ಕೂಡ ಮ್ಯಾಕ್ಸ್​ವೆಲ್​ ಪಾಲಾಯಿತು.

ಆಸರೆಯಾಗದ ರಾಹುಲ್​-ಸೂರ್ಯ

ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್​ ಅಯ್ಯರ್,​ ಸ್ಫೋಟಕ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್​ ಯಾದವ್​ ಮತ್ತು ಕೆ.ಎಲ್​ ರಾಹುಲ್​ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ವಿಫಲವಾದದ್ದು ಭಾರತದ ಹಿನ್ನಡೆಗೆ ಪ್ರಮುಖ ಕಾರಣ. ಅಯ್ಯರ್​ 48 ರನ್​ ಗಳಿಸಿದರೆ, ರಾಹುಲ್​ 26 ರನ್​ಗೆ ಆಟ ಮುಗಿಸಿದರು. ಸೂರ್ಯಕುಮಾರ್​ ಯಾದವ್​ ಒಂದು ಬೌಂಡಿಗೆ ಸೀಮಿತವಾಗಿ 7 ಎಸೆತಗಳಿಂದ 8ರನ್​ ಬಾರಿಸಿದರು. ಆಸೀಸ್​ ಪರ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಗ್ಲೆನ್​ ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ ಜಾದು ಮಾಡಿ ವಿಕೆಟ್​ ಕಿತ್ತು ಮಿಂಚಿದರು. ಅಂತಿಮ ಹಂತದಲ್ಲಿ ಜಡೇಜಾ 35 ರನ್​ ಬಾರಿಸಿದರು.

ಇದನ್ನೂ ಓದಿ Asian Games 2023: ಕೇವಲ ಒಂದು ಅಂಕದ ಅಂತರದಲ್ಲಿ ವಿಷ್ಣು​ಗೆ ಕೈತಪ್ಪಿದ ಬೆಳ್ಳಿ ಪದಕ

ಆಸೀಸ್​ ಪರ ಅಗ್ರ ಕ್ರಮಾಂಕದ ನಾಲ್ವರಿಂದ ಅಧರ್ಶತಕ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಪರ ಅಗ್ರ ಕ್ರಮಾಂಕದ ನಾಲ್ಕು ಮಂದಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಆರಂಭಿಕ ಆಟಗಾರ ಡೇವಿಡ್​ ವಾರ್ನರ್​(56), ಮಿಚೆಲ್​ ಮಾರ್ಷ್(96)​, ಸ್ಟೀವನ್​ ಸ್ಮಿತ್​(74) ಮತ್ತು ಮಾರ್ನಸ್​ ಲಬುಶೇನ್(72)​ ಅರ್ಧಶತಕ ಬಾರಿಸಿದ ಆಟಗಾರರು.

ದುಬಾರಿಯಾದ ಬುಮ್ರಾ

ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲು ಕಂಡಿದ್ದ ಆಸೀಸ್​ ಅಂತಿಮ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಆಡಿತು. ಆರಂಭಕಾರ ಮಿಚೆಲ್​ ಮಾರ್ಷ್​ ಈ ಪಂದ್ಯದಲ್ಲಿ ಸಂಪೂರ್ಣ ಜೋಶ್​ನಿಂದಲೇ ಬ್ಯಾಟಿಂಗ್​ ನಡೆಸಿದರು. ತಮ್ಮ ಜತೆಗಾರ ಡೇವಿಡ್​ ವಾರ್ನರ್​ ಜತೆ ಸೇರಿಕೊಂಡು ಯಾರ್ಕರ್​ ಕಿಂಗ್​ ಜಸ್​ಪ್ರೀತ್​ ಬುಮ್ರಾ ಅವರನ್ನು ಬೆಂಡೆತ್ತಿದ್ದರು. ಬುಮ್ರಾ ಅವರ ಪ್ರತಿ ಓವರ್​ಗೆ 10ರ ಸರಾಸರಿಯಲ್ಲಿ ರನ್​ ಗಳಿಸಿದರು. ಬುಮ್ರಾ 5 ಓವರ್​ ಪೂರ್ತಿಗೊಳಿಸುವ ವೇಳೆ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ವಾರ್ನರ್​ ಮತ್ತು ಮಿಚೆಲ್​ ಮಾರ್ಷ್​ ಅರ್ಧಶತಕ ಬಾರಿಸಿ ಮಿಂಚಿದರು. ಇವರ ಅಬ್ಬರದ ಬ್ಯಾಟಿಂಗ್​ಗೆ ಕನ್ನಡಿಗ ಪ್ರಸಿದ್ಧ್​ ಕೃಷ್ಟ ಕೊನೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ವಾರ್ನರ್​ ಅವರ ವಿಕೆಟ್​ ಕಿತ್ತು ಭಾರತಕ್ಕೆ ಅರ್ಲಿ ಬ್ರೇಕ್​ ಒದಗಿಸಿದರು.​ ​34 ಎಸೆತಗಳಲ್ಲಿ 56 ರನ್​ಗಳಿಸಿದ ವಾರ್ನರ್​ ಕೆ.ಎಲ್​ ರಾಹುಲ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ ದಾಖಲಾಯಿತು. ಮಾರ್ಷ್ ಮತ್ತು ವಾರ್ನರ್​ ಸೇರಿಕೊಂಡು ಮೊದಲ ವಿಕೆಟ್​ಗೆ 78 ರನ್​ ರಾಶಿ ಹಾಕಿದರು.

ದ್ವಿತೀಯ ವಿಕೆಟ್​ಗೆ ಶತಕದ ಜತೆಯಾಟ

ವಾರ್ನರ್​ ವಿಕೆಟ್​ ಬಿದ್ದರೂ ಆಸೀಸ್​ ರನ್​ ಗಳಿಕೆಯ ವೇಗ ಮಾತ್ರ ಕಡಿಮೆಯಾಗಲಿಲ್ಲ. ದ್ವಿತೀಯ ವಿಕೆಟ್​ಗೆ ಆಡಲಿಳಿದ ಸ್ಟೀವನ್​ ಸ್ಮಿತ್​ ಕೂಡ ಮಾರ್ಷ್​ ಜತೆ ಸೇರಿಕೊಂಡು ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಇವರ ಬ್ಯಾಟಿಂಗ್​ ವೇಗಕ್ಕೆ 27 ಓವರ್​ಗೆ ಆಸೀಸ್​ 200 ರನ್​ಗಳ ಗಡಿ ದಾಟಿತು. ಈ ವೇಳೆ ಆಸೀಸ್​ 400 ರನ್​ ಬಾರಿಸುವ ನಿರೀಕ್ಷೆಯೊಂದನ್ನು ಮಾಡಲಾಯಿತು. ಆದರೆ ಕುಲ್​ದೀಪ್​ ಡೇಂಜರಸ್​ ಬ್ಯಾಟರ್​ ಮಿಚೆಲ್​ ಮಾರ್ಷ್​ ಅವರ ವಿಕೆಟ್​ ಕಿತ್ತರು. ಇದರ ಬೆನ್ನಿಗೆ ಸ್ಟೀವನ್​ ಸ್ಮಿತ್​ ವಿಕೆಟ್​ ಕೂಡ ಬಿತ್ತು. ಇಲ್ಲಿಂದ ಭಾರತೀಯ ಬೌಲರ್​ಗಳು ಹಿಡಿತ ಸಾಧಿಸಿದರು.

4 ರನ್​ ಅಂತರದಲ್ಲಿ ಶತಕ ವಂಚಿತರಾದ ಮಾರ್ಷ್​

ಮಿಚೆಲ್ ಮಾರ್ಷ್​ 84 ಎಸೆತಗಳಿಂದ 13 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನಿಂದ 96 ರನ್​ ಬಾರಿಸಿ ಕೇವಲ 4 ರನ್​ ಅಂತರದಿಂದ ಶತಕ ವಂಚಿತರಾದರು. ಭಾರತ ಪರ 9 ಇನಿಂಗ್ಸ್​ನಲ್ಲಿ ಮಾರ್ಷ್​ 458 ರನ್​ ಪೂರ್ತಿಗೊಳಿಸಿದರು. ಮಾರ್ಷ್​ ವಿಕೆಟ್​ ಬಿದ್ದು 27 ರನ್​ ಒಟ್ಟುಗೂಡುವಷ್ಟರಲ್ಲಿ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಸ್ಟೀವನ್​ ಸ್ಮಿತ್​ ಕೂಡ ಔಟಾದರು. ದ್ವಿತೀಯ ವಿಕೆಟ್​ಗೆ ಈ ಜೋಡಿ ಬರೋಬ್ಬರಿ 137 ರನ್​ ಜತೆಯಾಟ ನಡೆಸಿತು. ಸ್ಮಿತ್​ ವಿಕೆಟ್​ ಸಿರಾಜ್​ ಪಾಲಾಯಿತು. ಸ್ಮಿತ್​ 8 ಬೌಂಡರಿ ಹಾಗೂ 1 ಸಿಕ್ಸರ್​ ಬಾರಿಸಿ 74 ರನ್​ ಗಳಿಸಿದರು.

ಮತ್ತೆ ಬ್ಯಾಟಿಂಗ್​ ಮಿಂಚು ಹರಿಸಿದ ಲಬುಶೇನ್

ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗದ ಮಾರ್ನಸ್​ ಲಬುಶೇನ್​ ಈ ಪಂದ್ಯದಲ್ಲಿಯೂ ಅಧರ್ಶತಕ ಬಾರಿಸಿ ಮಿಂಚಿದರು. ಸ್ಮಿತ್​ ಮತ್ತು ಮಾರ್ಷ್ ವಿಕೆಟ್​ ಬಿದ್ದ​ ಬಳಿಕ ನಾಟಕೀಯ ಕುಸಿತ ಕಂಡ ಆಸೀಸ್​ಗೆ ಆಸರೆಯಾಗಿ ನಿಂತು ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಈ ಪಂದ್ಯದಲ್ಲಿ ಆಡಲಿಳಿದರು. ಆದರೆ ಅವರ ಪ್ರದರ್ಶನ ಮಾತ್ರ ನಿರೀಕ್ಷಿತ ಮಟ್ಟದಿಂದ ಕೂಡಿರಲಿಲ್ಲ. 5 ರನ್​ಗೆ ಸೀಮಿತರಾದರು. ಆ ಬಳಿಕ ಬಂದ ಕ್ಯಾಮರೂನ್​ ಗ್ರೀನ್(9)​, ಅಲೆಕ್ಸ್​ ಕ್ಯಾರಿ(11) ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ವಿಫಲರಾದರು. ಉಭಯ ಆಟಗಾರರು ಸಿಂಗಲ್​ ಡಿಜಿಟ್​ಗೆ ಔಟಾದರು.

ಲಬುಶೇನ್ 58 ಎಸೆತ ಎದುರಿಸಿ 72 ರನ್​ ಬಾರಿಸಿ ಬುಮ್ರಾಗೆ ವಿಕೆಟ್​ ಒಪ್ಪಿಸಿದರು. ಆರಂಭದಲ್ಲಿ ಸರಿಯಾಗಿ ದಂಡಿಸಿಕೊಂಡ ಬುಮ್ರಾ ಅಂತಿಮ ಹಂತದಲ್ಲಿ ಹಿಡಿತ ಸಾಧಿಸಿ 3 ವಿಕೆಟ್​ ಕಿತ್ತರು. ಆದರೂ 81 ರನ್​ ಬಿಟ್ಟುಕೊಟ್ಟರು. ಕುಲ್​ದೀಪ್​ ಯಾದವ್​ ಮಾತ್ರ ಕಡಿಮೆ ರನ್​ ಬಿಟ್ಟುಕೊಟ್ಟು 2 ವಿಕೆಟ್​ ಪಡೆದರು.

Exit mobile version