ಸಿಡ್ನಿ: ಭಾರತ ವಿರುದ್ಧದ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಗೆ ಕ್ರಿಕೆಟ್ ಆಸ್ಟ್ರೇಲಿಯಾ(IND VS AUS) 18 ಆಟಗಾರರ ಬಲಿಷ್ಠ ತಂಡವನ್ನು ಬುಧವಾರ ಪ್ರಕಟಿಸಿದೆ. ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್ ಉಪನಾಯಕನಾಗಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ಟೆಸ್ಟ್ ವಿಶ್ವಕಪ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಈ ಸರಣಿ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ, ತಂಡದಲ್ಲಿ ನಾಲ್ಕು ಸ್ಪಿನ್ನರ್ಗಳಿಗೆ ಅವಕಾಶ ನೀಡಿದೆ.
ಹೊಸ ಪ್ರತಿಭೆ ಲ್ಯಾನ್ಸ್ ಮಾರಿಸ್ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ತಂಡದ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆಯಿಂದ ಚೇತರಿಸುತ್ತಿದ್ದು, ನಾಗ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಬಳಿಕದ ಪಂದ್ಯಕ್ಕೆ ಲಭ್ಯರಾಗಿದ್ದಾರೆ.
ಅಚ್ಚರಿಯ ಆಯ್ಕೆ ಎಂಬಂತೆ 22 ವರ್ಷದ ಟಾಡ್ ಮರ್ಫಿ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. “ಟಾಡ್ ಮರ್ಫಿ ಪ್ರದರ್ಶನದಲ್ಲಿ ಗಣನೀಯ ಪ್ರಗತಿಯಾಗಿದೆ. ದೇಶಿ ಟೂರ್ನಿಗಳಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಹೀಗಾಗಿ ಆಸೀಸ್ ತಂಡದ ಸ್ಪಿನ್ ವಿಭಾಗಕ್ಕೆ ಅವರು ಬಲ ತಂದುಕೊಡಬಲ್ಲರು ಎಂದು ಆಯ್ಕೆ ಮಾಡಲಾಗಿದೆ” ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಥಾನ್ ಲಿಯಾನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.
ಇದನ್ನೂ ಓದಿ | AUS VS SA | ಪಂದ್ಯದ ಮಧ್ಯೆ ದಿಢೀರ್ ಬ್ಯಾಟಿಂಗ್ ನಿಲ್ಲಿಸಿ ಸಿಗರೇಟ್ ಲೈಟರ್ ಕೇಳಿದ ಲಬುಶೇನ್; ವಿಡಿಯೊ ವೈರಲ್