ಇಂದೋರ್: ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತದ(IND VS AUS) ವಿರುದ್ಧ ಆಸ್ಟ್ರೇಲಿಯಾ 9 ವಿಕೆಟ್ಗಳ ಗೆಲುವು ದಾಖಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಸ್ಪಿನ್ ಸ್ನೇಹಿ ಪಿಚ್ನಲ್ಲಿ 75 ರನ್ಗಳ ಅಲ್ಪ ಗುರಿ ಪಡೆದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು 78 ರನ್ ಬಾರಿಸುವ ಮೂಲಕ ಅಧಿಕಾರಯುತ ಗೆಲುವು ದಾಖಲಿಸಿತು. ಒಂದಡೆ ಗಾಯದಿಂದಾಗಿ ಸ್ಟಾರ್ ಆಟಗಾರರ ಅಲಭ್ಯತೆ ಮತ್ತೊಂದೆಡೆ ನಾಯಕ ಪ್ಯಾಟ್ ಕಮಿನ್ಸ್ ಅವರ ಗೈರು ಹೀಗೆ ಹಲವು ಸಮಸ್ಯೆಗಳ ಮಧ್ಯೆಯೂ ಆತ್ಮವಿಶ್ವಾಸ ಕಳೆದುಕೊಳ್ಳದ ಆಸೀಸ್ ಭಾರತದ ಸವಾಲನ್ನು ಮೆಟ್ಟಿ ನಿಂತದ್ದು ನಿಜಕ್ಕೂ ಅದ್ಭುತ ಎಂದರೂ ತಪ್ಪಾಗಲಾರದು.
ಆಸ್ಟ್ರೇಲಿಯಾ ಸರಣಿ ಗೆಲ್ಲದಿದ್ದರೂ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ನೇರ ಪ್ರವೇಶ ಪಡೆದಿದೆ. ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಸೋತರೂ ಚಿಂತೆ ಪಡಬೇಕಿಲ್ಲ. ಆದರೆ ಭಾರತ ಈ ಸೋಲಿನೊಂದಿಗೆ ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ IND VS AUS: 10 ವರ್ಷಗಳಲ್ಲಿ ಮೂರನೇ ಸೋಲು ಕಂಡ ಭಾರತ
ಅಹಮದಾಬಾದ್ನಲ್ಲಿ ನಡೆಯಲಿರುವ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲೇ ಬೇಕಾದ ಸ್ಥಿತಿ ಎದುರಾಗಿದೆ. ಸದ್ಯ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ, ಶ್ರೀಲಂಕಾ ತಂಡಕ್ಕೂ ಸಹ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಅವಕಾಶ ಇದೆ.
ಭಾರತದ ಈ ಸೋಲಿನಿಂದಾಗಿ ಶ್ರೀಲಂಕಾ ತಂಡವು ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವಿದೆ. ಇನ್ನೊಂಡೆದೆ ದಕ್ಷಿಣ ಆಫ್ರಿಕಾ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆದ್ದರೆ ಇದಕ್ಕೂ ಫೈನಲ್ ಪ್ರವೇಶ ಪಡೆಯುವ ಅವಕಾಶವಿದೆ. ಆದ್ದರಿಂದ ರೋಹಿತ್ ಪಡೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲೇ ಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಒಂದೊಮ್ಮೆ ರೋಹಿತ್ ಪಡೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಭಾರತ ಈ ರೇಸ್ನಿಂದ ಹೊರ ಬೀಳುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಭಾರತಕ್ಕೆ ನಾಲ್ಕನೇ ಟೆಸ್ಟ್ ಮಾಡು ಇಲ್ಲ ಮಡಿ ಪಂದ್ಯವಾಗಲಿದೆ.