ಮುಂಬಯಿ: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನಾಡಲು ಆಸ್ಟ್ರೇಲಿಯಾ ತಂಡ ಬುಧವಾರ(ಮಾರ್ಚ್ 15) ಮುಂಬಯಿಗೆ ಬಂದಿಳಿದಿದೆ. ಉಭಯ ತಂಡದ ಈ ಮುಖಾಮುಖಿ ಶುಕ್ರವಾರ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಮುಂಬಯಿ ತಲುಪಿರುವ ಆಸೀಸ್ ಆಟಗಾರರು ಒಂದು ದಿನದ ವಿಶ್ರಾಂತಿ ಪಡೆಯಲಿದ್ದಾರೆ. ಗುರುವಾರ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಂಡದ ಮೂಲಗಳು ಮಾಹಿತಿ ನೀಡಿದೆ. ಭಾರತ ತಂಡದ ಕೆಲ ಆಟಗಾರರು ಇಂದು(ಬುಧವಾರ ಮಾರ್ಚ್ 15) ರಾತ್ರಿ ಮುಂಬಯಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲ ಆಟಗಾರರು ಗುರುವಾರ ಟೀಮ್ ಇಂಡಿಯಾ ಕ್ಯಾಂಪ್ ಸೇರಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ IND VS AUS: ಗಾಯಾಳು ಶ್ರೇಯಸ್ ಬದಲು ಸಂಜು ಸ್ಯಾಮ್ಸನ್ಗೆ ಅವಕಾಶ!
ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ. ಮೊದಲ ಪಂದ್ಯಕ್ಕೆ ರೋಹಿತ್ ಶರ್ಮ ಗೈರಾದ ಕಾರಣ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ನಾಯಕನಾಗಿದ್ದಾರೆ. ರೋಹಿತ್ ಬದಲು ಶುಭಮನ್ ಗಿಲ್ ಜತೆ ಟೀಮ್ ಇಂಡಿಯಾದ ಇನಿಂಗ್ಸ್ ಯಾರು ಆರಂಭಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಮೂಲಗಳ ಪ್ರಕಾರ ರಾಹುಲ್ ಈ ಪಂದ್ಯದಲ್ಲಿ ಆಡಿದರೂ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ, ಹೀಗಾಗಿ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.