ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗುವ ಸಲುವಾಗಿ ಭಾರತ(IND VS AUS) ಅಂತಿಮ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಗೆ ಮುಂದಾಗಿದ್ದು ಕೆ.ಎಸ್. ಭರತ್ ಬದಲು ಇಶಾನ್ ಕಿಶನ್ಗೆ ಅವಕಾಶ ನೀಡಲಿದೆ ಎಂದು ವರದಿಯಾಗಿದೆ.
ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೀಪಿರ್ ಆಗಿ ಕೆ.ಎಸ್.ಭರತ್(KS Bharat) ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದಾರೆ. ಮೂರೂ ಪಂದ್ಯದಲ್ಲಿ 5 ಇನಿಂಗ್ಸ್ ಆಡಿರುವ ಅವರು ಕೇವಲ 57 ರನ್ ಗಳಿಸಿದ್ದಾರೆ. ಇದರಲ್ಲಿ 23 ರನ್ ಅವರ ವೈಯಕ್ತಿಕ ಗರಿಷ್ಠ ಗಳಿಕೆಯಾಗಿದೆ. ಹೀಗಾಗಿ ಅವರ ಬದಲು ಇಶಾನ್ ಕಿಶನ್ಗೆ(ishan kishan) ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಪಂತ್ ಅವರ ಅನುಪಸ್ಥಿತಿಯಲ್ಲಿ ಭಾರತಕ್ಕೆ ಮಧ್ಯಮ ಕ್ರಮಾಂದಲ್ಲಿ ಬಿರುಸಿನ ಆಟಗಾರನ ಕೊರತೆ ಎದ್ದು ಕಾಣುತ್ತಿದೆ. ಪಂತ್ ತಂಡದಲ್ಲಿರುವಾಗ ಮಧ್ಯಮ ಕ್ರಮಾಂಕದಲ್ಲಿ ಅಟ್ಯಾಕಿಂಗ್ ಆಟವಾಡುವ ಮೂಲಕ ಹಲವು ಟೆಸ್ಟ್ ಪಂದ್ಯಗಳನ್ನು ಜಯಿಸಿ ಕೊಟ್ಟಿದ್ದಾರೆ. ಇದೀಗ ಅವರಂತೆಯೇ ಬ್ಯಾಟ್ ಬೀಸುವ ಇಶಾನ್ ಕಿಶನ್ ಅವರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಒದಿ IND VS AUS: ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಈವರೆಗೆ 13 ಏಕದಿನ ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ 1 ಶತಕ, 1 ದ್ವಿಶತಕ ಮತ್ತು 3 ಅರ್ಧಶತಕ ಸಹಿತ ಒಟ್ಟು 507 ರನ್ ಗಳಿಸಿದ್ದಾರೆ. 27 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 4 ಅರ್ಧಶತಕ ಸಹಿತ 653 ರನ್ ಕಲೆ ಹಾಕಿದ್ದಾರೆ. ಒಂದೊಮ್ಮೆ ಅವರು ಆಸೀಸ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೆ ಇದು ಅವರ ಟೆಸ್ಟ್ ಪದಾರ್ಪಣ ಪಂದ್ಯವಾಗಲಿದೆ.