ಇಂದೋರ್: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ ಅಂತರದಿಂದ ಸೋಲು ಕಂಡರೂ ಚೇತೇಶ್ವರ್ ಪೂಜಾರ(Cheteshwar Pujara) ವಿಶೇಷ ದಾಖಲೆ ಬರೆದಿದ್ದಾರೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ(ಮಾರ್ಚ್ 3) ಮುಕ್ತಾಯ ಕಂಡ ಈ ಟೆಸ್ಟ್ನಲ್ಲಿ ಭಾರತದ 76 ರನ್ಗಳ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 18.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 78 ರನ್ ಬಾರಿಸಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆಸೀಸ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅಧಿಕೃತವಾಗಿ ಲಗ್ಗೆಯಿಟ್ಟಿತು. ಸೋಲು ಕಂಡ ಭಾರತ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತು.
ಭಾರತದ ದ್ವಿತೀಯ ಇನಿಂಗ್ಸ್ ವೇಳೆ ಅತ್ಯಧಿಕ ಮೊತ್ತ ಪೇರಿಸಿದ ಚೇತೇಶ್ವರ್ ಪೂಜಾರ(59) ಅವರು ವಿಶೇಷ ಪ್ರಶಸ್ತಿಯೊಂದನ್ನು ಪಡೆದಿದ್ದಾರೆ. ಈ ಪಂದ್ಯದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ ಆಟಗಾರ ಎಂಬ ಪ್ರಶಸ್ತಿಗೆ ಭಾಜನರಾದರು. ನಥಾನ್ ಲಿಯೋನ್ ಅವರ ಎಸೆತದಲ್ಲಿ ಪೂಜಾರ ಈ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ 79 ಮೀಟರ್ ದೂರ ಸಾಗಿತು. ಇದು ಪೂಜಾರ ಅವರ 16ನೇ ಟೆಸ್ಟ್ ಸಿಕ್ಸರ್ ಆಗಿದೆ.
ಇದನ್ನೂ ಓದಿ IND VS AUS: ಮೂರನೇ ಟೆಸ್ಟ್ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ
ಪೂಜಾರ ಅವರು ಈ ಪ್ರಶಸ್ತಿ ಪಡೆಯುತ್ತಿದ್ದಂತೆ ನೆಟ್ಟಿಗರು ಕೆಲ ಹಾಸ್ಯಮಯ ಕಮೆಂಟ್ ಮಾಡಿದ್ದಾರೆ. ಪೂಜಾರ ಅವರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಅತ್ಯಂತ ಸ್ಮರಣೀಯ ಪ್ರಶಸ್ತಿ ಇದಾಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ನೆಟ್ಟಿಗರು ಸೇರಿ ಟೀಮ್ ಇಂಡಿಯಾ ಅಭಿಮಾನಿಗಳು ಪೂಜಾರ ಅವರ ಈ ಸಾಧನೆಯನ್ನು ಹಾಸ್ಯಮಯ ಕಮೆಂಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.