ನವದೆಹಲಿ: ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯವನ್ನಾಡಿದ ಚೇತೇಶ್ವರ್ ಪೂಜಾರ(Cheteshwar Pujara) ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ(IND VS AUS) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಚೇತೇಶ್ವರ್ ಪೂಜಾರ ಅವರಿಗೆ ಟೆಸ್ಟ್ ವೃತ್ತಿಜೀವನದ ನೂರನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಬೌಂಡರಿ ಬಾರಿಸುವ ಮೂಲಕ ಭಾರತದ ಗೆಲುವನ್ನು ಸಾರಿದರು. ಇದೇ ವೇಳೆ ಅವರು ನೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಿದ ದ್ವಿತೀಯ ಆಟಗಾರ ಎಂಬ ಸಾಧನೆ ಮಾಡಿದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ನೂರನೇ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಿದ್ದರು.
ಇದನ್ನೂ ಓದಿ IND VS AUS: 100ನೇ ಟೆಸ್ಟ್ ಪಂದ್ಯವನ್ನಾಡಿದ ಪೂಜಾರಗೆ ವಿಶೇಷ ಉಡುಗೊರೆ ನೀಡಿದ ಆಸೀಸ್ ತಂಡ
ಸ್ವಾರಸ್ಯವೆಂದರೆ ಅಂದು ನೂರನೇ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಇದೀಗ ಪೂಜಾರ ಕೂಡ ಬೌಂಡರಿ ಮೂಲಕವೇ ಈ ಸಾಧನೆ ಮಾಡಿದ್ದು ವಿಶೇಷ. ಪೂಜಾರ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದ್ದರೂ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 31 ರನ್ ಬಾರಿಸಿ ಮಿಂಚಿದರು. ಜತೆಗೆ ತಂಡದ ಗೆಲುವಿನ ರನ್ ಬಾರಿಸಿ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯಗೊಳಿಸಿದರು.