ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್(border gavaskar trophy) ಟ್ರೋಫಿಯ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ಇದೀಗ ದ್ವಿತೀಯ ಪಂದ್ಯಲ್ಲಿಯೂ ತಮ್ಮ ಕಳಪೆ ಬ್ಯಾಟಿಂಗ್ ಸರಣಿಯನ್ನು ಮುಂದುವರಿಸಿ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಹುಲ್ ಅವರು ಬ್ಯಾಟಿಂಗ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ರಾಹುಲ್ ಆಟವನ್ನು ಗಮನಿಸುವಾಗ ಅವರು ಸಂಪೂರ್ಣವಾಗಿ ಆಟದ ಮೇಲಿನ ಶ್ರದ್ಧೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಯಾವ ಎಸೆತಕ್ಕೆ ಹೇಗೆ ಆಡಬೇಕು ಎನ್ನುವುದನ್ನು ಮರೆತಂತೆ ತೋರುತ್ತಿದೆ. ಕೆಲ ಎಸೆತಕ್ಕೆ ಅವರಿಗೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬ ಗೊಂದಲದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ ಇದೇ ಕಾರಣದಿಂದ ಅವರು ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
“ಕೆ.ಎಲ್. ರಾಹುಲ್ ತನ್ನ ಮುಂಭಾಗದ ಪಾದವನ್ನು ಅಡ್ಡಲಾಗಿ ಇಟ್ಟು ಚೆಂಡನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ನೇರ ಬ್ಯಾಟ್‌ನೊಂದಿಗೆ ಆಡಬೇಕು. ಆದರೆ ರಾಹುಲ್ ಇಲ್ಲಿ ಎಡವುತ್ತಿದ್ದಾರೆ. ಉದಾಹರಣೆಗೆ ರೋಹಿತ್ ಅವರ ಬ್ಯಾಟಿಂಗ್ ಗಮನಿಸುವುದಾದರೆ, ಅವರು ಮುಂಭಾಗದ ಪಾದವನ್ನು ಸರಿಸಿ ಬ್ಯಾಟ್ ಮುಂದಿಟ್ಟು ಚೆಂಡನ್ನು ಎದುರಿಸುತ್ತಾರೆ. ಹೀಗಾಗಿ ರೋಹಿತ್ ತುಂಬಾ ಸುರಕ್ಷಿತವಾಗಿ ಆಡುವಂತೆ ಕಾಣುತ್ತದೆ” ಇದೇ ರೀತಿಯ ತಂತ್ರವನ್ನು ರಾಹುಲ್ ಬಳಸಿದರೆ ಅವರ ಬ್ಯಾಟಿಂಗ್ ತಂತ್ರದಲ್ಲಿನ ದೋಷ ಪರಿಹಾರಗೊಳ್ಳಲಿದೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.
ಇನ್ನೊಂದೆಡೆ ಆಸ್ಟ್ರೇಲಿಯದ ಶ್ರೇಷ್ಠ ಆಟಗಾರ ಮಾರ್ಕ್ ವಾ ಅವರು ರಾಹುಲ್‌ಗೆ ಔಟಾಗುವ ಭಯವಿದೆ ಎಂದು ಹೇಳಿದ್ದಾರೆ. ಆ ಭಯವು ಅವರ ಸ್ವಾಭಾವಿಕ ಆಟಕ್ಕೆ ನಿರ್ಬಂಧಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ INDvsAUS : ಎರಡನೇ ಇನಿಂಗ್ಸ್ನಲ್ಲಿ ವೇಗದ ರನ್ ಗಳಿಕೆಗೆ ಮೊರೆ ಹೋದ ಆಸ್ಟ್ರೇಲಿಯಾ; 62 ರನ್ ಮುನ್ನಡೆ
“ಕೆ.ಎಲ್ ರಾಹುಲ್ ಅವರು ರಕ್ಷಣಾತ್ಮ ಆಟದ ಮೊರೆ ಹೋಗಿರುವುದೇ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ. ಅವರು ಸ್ವತಂತ್ರವಾಗಿ ಯಾವುದೇ ಭಯವಿಲ್ಲದೆ ಬ್ಯಾಟ್ ಬೀಸಿದರೆ ಉತ್ತಮ ರನ್ ಗಳಿಸುತ್ತಾರೆ” ಎಂದು ವಾ ಹೇಳಿದ್ದಾರೆ. ಆದರೆ ರಾಹುಲ್ ಕಳಪೆ ಬ್ಯಾಟಿಂಗ್ಗೆ ನೆಟ್ಟಿಗರು ಹಲವು ಮೀಮ್ಸ್ಗಳನ್ನು ಶೇರ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.