ಚೆನ್ನೈ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಇಂದು ನಡೆಯುವ ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ವಿಶ್ವಕಪ್(icc world cup 2023) ಪಂದ್ಯದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುವ ಇರಾದೆಯಲ್ಲಿದ್ದಾರೆ. ಚೆನ್ನೈಯಲ್ಲಿ ನಡೆಯುವ ಈ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್(hit man rohit) ಮೂರು ಸಿಕ್ಸರ್ ಬಾರಿಸಿದರೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆಗ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್(Chris Gayle) ದಾಖಲೆ ಪತನಗೊಳ್ಳಲಿದೆ.
ಮೂರು ಸಿಕ್ಸರ್ ಅಗತ್ಯ
ಸದ್ಯ ರೋಹಿತ್ ಶರ್ಮ ಅವರು 551 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಂಡೀಸ್ನ ಮಾಜಿ ಆಟಗಾರ ಕ್ರಿಸ್ ಗೇಲ್ 553 ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಆಸೀಸ್ ವಿರುದ್ಧ ಮೂರು ಸಿಕ್ಸರ್ ಸಿಡಿಸಿದರೆ ಗೇಲ್ ದಾಖಲೆ ಮುರಿಯಲಿದೆ.
ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ ಉಳಿದ ಟಾಪ್ 5 ಆಟಗಾರರೆಂದರೆ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ (476) ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ದಿಗ್ಗಜ ಆಟಗಾರ ಬ್ರೆಂಡನ್ ಮೆಕಲಮ್ (398) ನಾಲ್ಕನೇ ಸ್ಥಾನದಲ್ಲಿದ್ದಾರೆ. ಮತೊಬ್ಬ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ 383 ಸಿಕ್ಸರ್’ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಅತ್ಯಧಿಕ ಶತಕ
ರೋಹಿತ್ ಶರ್ಮ ಅವರು ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲಯನ್ನು ಮುರಿದಿದ್ದರು. ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು.
ಸಚಿನ್ ದಾಖಲೆ ಮೇಲೆ ಕಣ್ಣು
ವಿಶ್ವಕಪ್ನಲ್ಲಿ ರೋಹಿತ್ ಒಟ್ಟು ರೋಹಿತ್ 6 ಶತಕ ಬಾರಿಸಿದ್ದಾರೆ. 2019 ರಲ್ಲಿ 5, 2015 ವಿಶ್ವಕಪ್ನಲ್ಲಿ ಒಂದು ಶತಕ ಬಾರಿಸಿದ್ದರು. ಈ ಬಾರಿಯೂ ಕೆಲವು ಶತಕದ ನಿರೀಕ್ಷೆ ಮಾಡಲಾಗಿದೆ. ಒಂದು ಶತಕ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಸಾರ್ವಕಾಲಿ ದಾಖಲೆ ಪತನಗೊಳ್ಳಲಿದೆ. ಸದ್ಯ ರೋಹಿತ್ ಮತ್ತು ಸಚಿನ್ 6 ಶತಕ ದಾಖಲಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs AUS: ಆಸೀಸ್ ಪಂದ್ಯಕ್ಕೆ ಹೀಗಿರಲಿದೆ ಭಾರತ ಆಡುವ ಬಳಗ; ಅಶ್ವಿನ್ಗೆ ಅವಕಾಶ
ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದಲ್ಲಿ ಗರಂ ಆಗಿದ್ದ ರೋಹಿತ್
ಬುಧವಾರ ಅಹಮದಾಬಾದ್ನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್(ICC World Cup 2023) ಟೂರ್ನಿಯ ಕ್ಯಾಪ್ಟನ್ಸ್ ಡೇ(Captain’s Day) ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಪತ್ರಕರ್ತನ ಪ್ರಶ್ನೆಗೆ ಗರಂ ಆಗಿ ತೀಕ್ಷ್ಣ ರೀತಿಯಲ್ಲೇ ಉತ್ತರಿಸಿದ್ದರು.
ರೋಹಿತ್ ಬಳಿ 2019ರ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ನ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಫೈನಲ್ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ, ಸೂಪರ್ ಓವರ್ ಕೂಡ ಟೈಗೊಂಡ ಕಾರಣ ಕೊನೆಗೆ ಬೌಂಡರಿ ಆಧಾರದಲ್ಲಿ ವಿಜೇತರನ್ನು ಘೋಷಿಸಲಾಗಿತ್ತು. ನಿಮ್ಮ ಪ್ರಕಾರ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಬೇಕೇ?” ಎಂದು ವರದಿಗಾರರು ರೋಹಿತ್ ಬಳಿ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ರೋಹಿತ್ ‘ವಿಜೇತರನ್ನು ಘೋಷಿಸುವುದು ನನ್ನ ಕೆಲಸವಲ್ಲ’ ಈ ರೀತಿಯ ಅನಗತ್ಯ ಪ್ರಶ್ನೆಯನ್ನು ಕೇಳುವುದನ್ನು ಮೊದಲು ನಿಲ್ಲಿಸಿ” ಎಂದು ಖಡಕ್ ಆಗಿ ತಿರುಗೇಟು ನೀಡಿದ್ದರು.