ನವದೆಹಲಿ: ತವರಿನಲ್ಲಿ ಟೀಮ್ ಇಂಡಿಯಾವನ್ನು(IND VS AUS) ಸೋಲಿಸುವುದು ಅಷ್ಟು ಸುಲಭವಿಲ್ಲ ಎಂದು ಪಾಕ್ ತಂಡದ ಮಾಜಿ ಆಟಗಾರ ರಮೀಜ್ ರಾಜಾ(Ramiz Raja) ಹೇಳಿದ್ದಾರೆ. ಜತೆಗೆ ಪಿಚ್ ಬಗ್ಗೆಗಿನ ವಿಚಾರದಲ್ಲಿ ಭಾರತ ಪರ ಬ್ಯಾಟ್ ಬೀಸಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿದ ರಮೀಜ್ ರಾಜಾ ಅವರು ‘ಭಾರತ ತಂಡದಲ್ಲಿರುವ ಈಗಿನ ಆಟಗಾರರು ಬಲಿಷ್ಠವಾಗಿದ್ದಾರೆ. ಹೀಗಾಗಿ ಭಾರತ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದು ಕಷ್ಟಕರ. ಅದರಲ್ಲೂ ರವೀಂದ್ರ ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್ ಅವರಂತಹ ಸ್ಪಿನ್ ದಾಳಿಯನ್ನು ಆಸೀಸ್ ಆಟಗಾರರು ಎದುರಿಸುವುದು ಅಸಾಧ್ಯವಾಗಿದೆ’ ಎಂದು ಹೇಳಿದರು.
ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಆಟವನ್ನು ಹೊಗಳಿರುವ ರಮೀಜ್ ರಾಜಾ, 2ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ ಕುಸಿತ ಕಂಡಾಗ ಅಕ್ಷರ್ ಪಟೇಲ್ ಅವರು 74 ರನ್ ಸಿಡಿಸಿ ತಂಡಕ್ಕೆ ನೆರವಾಯಿತು. ಈ ಮೂಲಕ ಭಾರತವನ್ನು ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡುವ ಆಸ್ಟ್ರೇಲಿಯಾದ ಎಲ್ಲ ತಂತ್ರವನ್ನು ಅವರು ಹುಸಿ ಮಾಡಿದರು ಎಂದು ಅಕ್ಷರ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ Ramiz Raja | ಬಿಜೆಪಿ ಮನಸ್ಥಿತಿ ಹೊಂದಿರುವ ಬಿಸಿಸಿಐ; ರಮೀಜ್ ರಾಜಾ ಹೇಳಿಕೆಗೆ ಆಕ್ರೋಶ!
ಭಾರತ ಪೂರ್ಣ ಪ್ರಮಾಣದ ಸ್ಪಿನ್ ಪಿಚ್ ತಯಾರಿಸಿ ಆಸ್ಟ್ರೇಲಿಯಾವನ್ನು ಮಣಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ರಮೀಜ್ ರಾಜಾ, ಆಸ್ಟ್ರೇಲಿಯಾದಲ್ಲಿ ಸರಣಿ ನಡೆಯುವ ವೇಳೆ ಅವರು ವೇಗದ ಪಿಚ್ ತಯಾರಿಸಿಕೊಳ್ಳುತ್ತಾರೆ. ಅದೇ ರೀತಿ ಭಾರತ ಸ್ಪಿನ್ ಸ್ನೇಹಿ ಪಿಚ್ ರೂಪಿಸಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ತಂಡ ಪ್ರವಾಸಕ್ಕೂ ಮೊದಲು ಉತ್ತಮ ತಯಾರಿ ನಡೆಸದಿರುವುದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.