Site icon Vistara News

IND vs AUS: 32 ವರ್ಷಗಳ ಬಳಿಕ ಭಾರತ-ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್​ ಸರಣಿ ಆಯೋಜನೆ

India and Australia

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ(India vs Australia) ನಡುವಿನ ವರ್ಷಾಂತ್ಯದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು(Border-Gavaskar Trophy Test series) ಈ ಬಾರಿ 5 ಪಂದ್ಯಗಳ ಸರಣಿಯಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ತಿಳಿಸಿದೆ. ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಂದು ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು. ಶೀಘ್ರದಲ್ಲೇ ಕ್ರಿಕೆಟ್‌ ಆಸ್ಟ್ರೇಲಿಯಾ ಈ ಸರಣಿಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

”1991-92ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತ ಈ ಬೇಸಿಗೆಯಲ್ಲಿ ಐದು ಟೆಸ್ಟ್‌ಗಳ ಸರಣಿಯಲ್ಲಿ ಸ್ಪರ್ಧಿಸಲಿವೆ. ಬಾರ್ಡರ್-ಗವಾಸ್ಕರ್(Border-Gavaskar Trophy) ಟ್ರೋಫಿಗಾಗಿ ವಿಸ್ತೃತ ಸರಣಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಸಾಮಾಜಿಕ ಮಾಧ್ಯಮದ ಹೇಳಿಕೆಯಲ್ಲಿ ತಿಳಿಸಿದೆ. ಬಿಸಿಸಿಐ ಮತ್ತು ಕ್ರಿಕೆಟ್​ ಆಸ್ಟ್ರೇಲಿಯಾ ಜಂಟಿಯಾಗಿ ಈ ಬೆಳವಣಿಗೆಯನ್ನು ಪ್ರಕಟಿಸಿವೆ. ”ಟೆಸ್ಟ್ ಕ್ರಿಕೆಟ್‌ನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ತನ್ನ ಸಮರ್ಪಣೆಯಲ್ಲಿ ಬಿಸಿಸಿಐ ಅಚಲವಾಗಿದೆ, ನಾವು ಅತ್ಯಂತ ಗೌರವವನ್ನು ಹೊಂದಿದ್ದೇವೆ,” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕ್ರಿಕೆಟ್​ ಆಸ್ಟ್ರೇಲಿಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತವು ಇತ್ತೀಚಿನ ಕೆಲ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿದೆ. ಕಳೆದ 4 ಸರಣಿಗಳಲ್ಲಿ ಭಾರತವೇ ಗೆದ್ದು ಬಂದಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು. ಆದಾಗ್ಯೂ, 2023ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ತಂಡವು ಭಾರತವನ್ನು ಸೋಲಿಸಿತ್ತು.

ಇದನ್ನೂ ಓದಿ IPL 2024 : ಐಪಿಎಲ್​ ಮ್ಯಾಚ್​ ಇದೆ, ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಬೇಡಿ, ಹೋಗಬೇಡಿ

ಕಳೆದ ವಾರ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಉಭಯ ತಂಡಗಳ ಈ 5 ಪಂದ್ಯಗಳ ಸರಣಿಯ ಸಂಭಾವ್ಯ ವೇಳಾಪಟ್ಟಿಯೊಂದನ್ನು ಪ್ರಕಟಿಸಿತ್ತು. ಪರ್ತ್‌ನಲ್ಲಿ ಮೊದಲ ಟೆಸ್ಟ್‌ ನಡೆಯಲಿದೆ ಎಂದು ಹೇಳಿತ್ತು. ಉಳಿದಂತೆ ಅಡಿಲೇಡ್‌, ಬ್ರಿಸ್ಬೇನ್‌, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ಉಳಿದ 4 ಟೆಸ್ಟ್‌ಗಳನ್ನು ಆಡಲಾಗುವುದು. ಅಡಿಲೇಡ್‌ ಓವಲ್‌ನಲ್ಲಿ ದ್ವಿತೀಯ ಟೆಸ್ಟ್‌ ನಡೆಯಲಿದ್ದು, ಇದು ಹಗಲು-ರಾತ್ರಿ ಪಂದ್ಯ ಆಗಿರಲಿದೆ. ಬ್ರಿಸ್ಬೇನ್‌ನಲ್ಲಿ 3ನೇ ಟೆಸ್ಟ್‌ ನಡೆಯಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಬಾಕ್ಸಿಂಗ್‌ ಡೇ ಟೆಸ್ಟ್‌ ಹಾಗೂ ನ್ಯೂ ಇಯರ್‌ ಟೆಸ್ಟ್‌ ಪಂದ್ಯಗಳ ಆತಿಥ್ಯ ಮೆಲ್ಬರ್ನ್ ಮತ್ತು ಸಿಡ್ನಿ ಪಾಲಾಗುವ ಸಾಧ್ಯತೆ ಇದೆ.

Exit mobile version