ಚೆನ್ನೈ: ಇದೇ ಮೊದಲ ಬಾರಿ ಸಂಪೂರ್ಣವಾಗಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ಭಾರತ(IND vs AUS) ತನ್ನ ವಿಶ್ವಕಪ್(icc world cup 2023) ಅಭಿಯಾನವನ್ನು ಭಾನುವಾರ ಆರಂಭಿಸಲಿದೆ. ಚೆನ್ನೈಯಲ್ಲಿ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯದ ಹವಾಮಾನ ವರದಿ, ಪಿಚ್ ರಿಪೋರ್ಟ್ ಕುರಿತ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಚೆನ್ನೈಯ ಐಕಾನಿಕ್ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್ ಅನ್ನು ನವೀಕರಿಸಲಾಗಿದೆ. ಮೇಲ್ಮೈಗಳನ್ನು ಕೆಂಪು ಮಣ್ಣಿಗಿಂತ ಹೆಚ್ಚು ಜೇಡಿಮಣ್ಣಿನ ಅಂಶದೊಂದಿಗೆ ಕಪ್ಪು ಮಣ್ಣಿನಿಂದ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ವೇಗಿಗಳು ಹೆಚ್ಚುವರಿ ಬೌನ್ಸ್ ನಡೆಸಲು ಸಾಧ್ಯವಿದೆ. ಆದಾಗ್ಯೂ, ಚೆನ್ನೈನಲ್ಲಿ ನಡೆಯುವ ಸ್ಪಿನ್ ಮೋಡಿಗೇನು ಕೊರತೆಯಾಗದು. ಸ್ಪಿನ್ನರ್‌ಗಳು ಆಟದ ಉದ್ದಕ್ಕೂ ಯೋಗ್ಯವಾದ ತಿರುವು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನಿಂಗ್ಸ್ನ ಎವರೇಜ್ ರನ್ 247.
ಹವಾಮಾನ ವರದಿ
ಚೆನ್ನೈಯಲ್ಲಿ ಹಿಂಗಾರು ಮಾರುತ ಆರಂಭವಾಗುವ ಕಾರಣ ಈ ಪಂದ್ಯಕ್ಕೆ ಮಳೆಯ ಕಾಟ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಚೆನ್ನೈಯಲ್ಲಿ ಕೆಲ ದಿನಗಳಿಂದ ರಾತ್ರಿಯ ವೇಳೆ ಮಳೆಯಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಪಂದ್ಯ ಮಧ್ಯಾಹ್ನ ಆರಂಭಗೊಳ್ಳುವ ಕಾರಣ ಒಂದು ಇನಿಂಗ್ಸ್ ಪೂರ್ಣಗೊಳ್ಳಬಹುದು.
ಮೀಸಲು ದಿನ ಇಲ್ಲ
ಒಂದೊಮ್ಮೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಫಲಿತಾಂಶ ನಿರ್ಧಾರವಾಗದಿದ್ದರೆ ಮೀಸಲು ದಿನ ಇರುವುದಿಲ್ಲ. ಈಗಾಗಕೇ ಐಸಿಸಿ ಮಳೆ ನಿಯಮವನ್ನು ಪ್ರಕಟಿಸಿದೆ. ಅದರಂತೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ಆಸೀಸ್ ತಂಡಗಳು 12 ಆವೃತ್ತಿಯ ವಿಶ್ವಕಪ್ ಮಹಾ ಸಮರದಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಒಂದು ಬಾರಿ ಫೈನಲ್ನಲ್ಲಿ ಸೆಣಸಾಡಿವೆ. ಇದು 2003ರ ವಿಶ್ವಕಪ್ ಟೂರ್ನಿ. ಫೈನಲ್ನಲ್ಲಿ ಭಾರತ ಸೋಲು ಕಂಡು 2ನೇ ಬಾರಿ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. 12 ಪಂದ್ಯಗಳ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಇದನ್ನೂ ಓದಿ IND vs AUS: ಭಾರತ-ಆಸೀಸ್ ವಿಶ್ವಕಪ್ ಮುಖಾಮುಖಿಯೇ ಬಲು ರೋಚಕ; ಚೆನ್ನೈಯಲ್ಲೂ ನಡೆದಿತ್ತು ಒಂದು ಪಂದ್ಯ
ಭಾರತ ತಂಡದ ಪ್ಲಸ್ ಮತ್ತು ಮೈನಸ್ ಪಾಯಿಂಟ್
ಸಾಮರ್ಥ್ಯ: ಬ್ಯಾಟಿಂಗ್ ಅಥವಾ ಸ್ಪಿನ್ ಬೌಲಿಂಗ್ ಭಾರತದ ಶಕ್ತಿಯಾಗಿದ್ದ ದಿನಗಳು ಕಳೆದುಹೋಗಿವೆ. ಈಗ, ಇದು ಸಂಘಟಿತ ತಂಡವಾಗಿದೆ. ಅಗ್ರ 5 ಪರಿಪೂರ್ಣ ಬ್ಯಾಟರ್ಗಳು ತಂಡಕ್ಕೆ ದೊಡ್ಡ ಕೊಡುಗೆ ನೀಡಿದರೆ, ಆ ಬಳಿಕ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಆಸರೆಯಾಗಿ ನಿಂತು 7ನೇ ವಿಕೆಟ್ಗೂ ಉತ್ತಮ ಇನಿಂಗ್ಸ್ ಕಟ್ಟಬಲ್ಲರು. ಬೌಲಿಂಗ್ನಲ್ಲಿ ಸಿರಾಜ್, ಬುಮ್ರಾ ವಿಕೆಟ್ ಟೇಕರ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಳೆದ ಕೆಲ ಸರಣಿಯ ಪ್ರದರ್ಶನವೇ ಉತ್ತಮ ನಿದರ್ಶನ
ದೌರ್ಬಲ್ಯ: ಭಾರತ ತಂಡದ ದೌರ್ಬಲ್ಯವೆಂದರೆ ಅದು ಫೀಲ್ಡಿಂಗ್. ಈ ಹಿಂದೆ ಫೀಲ್ಡಿಂಗ್ ಕೋಚ್ ಆಗಿದ್ದ ಆರ್ ಶ್ರೀಧರ್ ನಿರ್ಗಮನದ ಬಳಿಕ ಭಾರತದ ಫೀಲ್ಡಿಂಗ್ ನಿಖರತೆ ಸಂಪೂರ್ಣವಾಗಿ ಕುಸಿದಿದೆ. ಟಿ ದಿಲೀಪ್ ಅವರ ಅಡಿಯಲ್ಲಿ, ಭಾರತ ಸಂಪೂರ್ಣ ಕಳಪೆ ಫೀಲ್ಡಿಂಗ್ ನಡೆಸಿದೆ. ಏಷ್ಯಾಕಪ್, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ಕ್ಯಾಚ್ ಬಿಟ್ಟು ಟೀಕೆಗೆ ಒಳಗಾಗಿತ್ತು. ಇದನ್ನು ಭಾರತ ಸರಿಪಡಿಸಿಕೊಳ್ಳಲೇ ಬೇಕು.