ಅಹಮದಾಬಾದ್: ಬೋರ್ಡರ್-ಗವಸ್ಕರ್ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಮೂರೇ ದಿನಗಳಲ್ಲಿ ಮುಕ್ತಾಯ ಕಂಡ ಕಾರಣ ಅಹಮದಾಬಾದ್(Ahmedabad) ಟ್ರ್ಯಾಕ್ ಹೇಗೆ ವರ್ತಿಸೀತು ಎಂಬ ತೀವ್ರ ಕುತೂಹಲದ ಮಧ್ಯೆ ಭಾರತ(IND VS AUS) ಮತ್ತು ಆಸ್ಟ್ರೇಲಿಯಾ ತಂಡಗಳು ಇಲ್ಲಿ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿವೆ. ಉಭಯ ತಂಡಗಳ ಈ ಪಂದ್ಯ ಗುರುವಾರ(ಮಾರ್ಚ್ 9)ದಿಂದ ಆರಂಭವಾಗಲಿದೆ.
ಒಂದು ಕಾಲದಲ್ಲಿ ಅಹಮದಾಬಾದ್(Ahmedabad) ಟ್ರ್ಯಾಕ್ ದೇಶದ ಅತೀ ವೇಗದ ಏಕೈಕ ಟ್ರ್ಯಾಕ್ ಎಂದು ಹೆಸರುವಾಸಿಯಾಗಿತ್ತು. ಆದರೆ ಈ ಮೈದಾನ ನವೀಕರಣಗೊಂಡ ಬಳಿಕ ಇಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿಲ್ಲ. 2021ರಲ್ಲಿ ಇಲ್ಲಿನ ನವೀಕೃತ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಾದ ಟೆಸ್ಟ್ ಪಂದ್ಯ ಎರಡೇ ದಿನದಲ್ಲಿ ಮುಗಿದಿತ್ತು. ಇನ್ನೊಂದು ಟೆಸ್ಟ್ 3 ದಿನಗಳಾಚೆ ಕಾಲಿಟ್ಟಿರಲಿಲ್ಲ. ಇದೀಗ ಈ ಪಂದ್ಯವೂ ಇದೇ ರೀತಿ ಅಂತ್ಯ ಕಾಣಲಿದೆಯಾ ಎಂದು ಕಾದು ನೋಡಬೇಕಿದೆ.
ಪಿಚ್ ಗುಟ್ಟು ಬಿಟ್ಟುಕೊಡದ ಕ್ಯುರೇಟರ್
ಇಲ್ಲಿನ ಪಿಚ್ ಹೇಗೆ ಇರಲಿದೆ ಎಂಬ ಗುಟ್ಟನ್ನು ಇದುವರೆಗೂ ಕ್ಯುರೇಟರ್ಗಳು ಬಿಟ್ಟುಕೊಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಕ್ಯುರೇಟರ್‌ಗಳಾದ ತಪೋಶ್ ಚಟರ್ಜಿ ಮತ್ತು ಆಶಿಷ್ ಭೌಮಿಕ್ ಪಿಚನ್ನು ನಿರ್ದಿಷ್ಟವಾಗಿ ಹೀಗೆಯೇ ನಿರ್ಮಿಸಬೇಕು ಎಂದು ಯಾರಿಂದಲೂ ಸೂಚನೆ ಬಂದಿಲ್ಲ ಎಂದು ಹೇಳಿದ್ದರು. ಒಂದೊಮ್ಮೆ ಈ ಪಿಚ್ ಈಗಲೂ ಹಳೇಯ ಪಿಚ್ ಆಗಿಯೇ ಉಳಿದಿದ್ದರೆ ಈ ಪಂದ್ಯವಾದರೂ ಭಿನ್ನ ರೀತಿಯಲ್ಲಿ ಸಾಗಬಹುದು ಎಂಬ ನಿರೀಕ್ಷೆ ಇರಿಸಬಹುದು.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆ.ಎಸ್ ಭರತ್/ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜೈದೇವ್ ಉನಾದ್ಕತ್.
ಇದನ್ನೂ ಓದಿ IND VS AUS: ಎಲ್ಲ ಪಿಚ್ಗಳು ಆಟಗಾರರಿಗೆ ಸವಾಲಿನಿಂದ ಕೂಡಿರುತ್ತದೆ; ರಾಹುಲ್ ದ್ರಾವಿಡ್
ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್/ ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್, ಲ್ಯಾನ್ಸ್ ಮೋರಿಸ್.