ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಧರ್ಮಶಾಲಾದಿಂದ(Dharamsala) ಬಹುತೇಕ ಶಿಫ್ಟ್ ಆಗಲಿದೆ ಎಂದು ತಿಳಿದುಬಂದಿದೆ. ಮುಂದಿನ 5 ದಿನಗಳ ಒಳಗೆ ಈ ವಿಚಾರವನ್ನು ಬಿಸಿಸಿಐ ಖಚಿತಪಡಿಸಲಿದೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ(Himachal Pradesh Cricket Association) ನವೀಕರಣಗೊಂಡ ಕಾರಣ ಇನ್ನೂ ಪಂದ್ಯವನ್ನಾಡಲು ಸೂಕ್ತವಾಗಿಲ್ಲ. ಇದೇ ಕಾರಣದಿಂದ ಬಿಸಿಸಿಐ ಇಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ಬೇರೆ ತಾಣಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ.
“ಧರ್ಮಶಾಲಾದಲ್ಲಿ ಪಂದ್ಯ ನಡೆಸಲು ಸೂಕ್ತ ರೀತಿಯ ಪಿಚ್ ಇನ್ನೂ ನಿರ್ಮಾಣವಾಗಿಲ್ಲ. ಈ ವಿಚಾರವನ್ನು ಈಗಾಗಲೇ ಬಿಸಿಸಿಐ ಗಮನಕ್ಕೆ ತರಲಾಗಿದೆ” ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಬಿಸಿಸಿಐ ಮೂರನೇ ಪಂದ್ಯಕ್ಕೆ ರಾಜ್ಕೋಟ್, ಇಂದೋರ್, ವಿಶಾಖಪಟ್ಟಣಂ, ಪುಣೆ ಈ ನಾಲ್ಕು ತಾಣಗಳನ್ನು ಆಯ್ಕೆ ಮಾಡಿದೆ. ಆದರೆ ಅಂತಿಮವಾಗಿ ಯಾವ ತಾಣವನ್ನು ಆಯ್ಕೆ ಮಾಡಲಿದೆ ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ. ಇನ್ನೊಂದೆಡೆ ಬಿಸಿಸಿಐ ಮೂರನೇ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಹೀಗಾಗಿ ಈ ಪಂದ್ಯ ಬಹುತೇಕ ಶಿಫ್ಟ್ ಆಗುವುದು ಪಕ್ಕಾ ಎನ್ನುವಂತಿದೆ.