ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಅಹಮದಾಬಾದ್ ಟೆಸ್ಟ್ನಲ್ಲಿ ಬೆನ್ನು ನೋವಿಗೆ ತುತ್ತಾಗಿ ಪಂದ್ಯದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಇದೀಗ ಆಸೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿ ನೀಡಿದ ನಾಯಕ ರೋಹಿತ್ ಶರ್ಮಾ, ಅಯ್ಯರ್ ಬೆನ್ನು ನೋವಿನ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಗಾಯದ ಸ್ವರೂಪ ದೊಡ್ಡ ಪ್ರಮಾಣದಲ್ಲಿ ಆಗದಿದ್ದರೂ ಅವರು ಏಕದಿನ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ. ಆದರೆ ಅವರು ಶೀಘ್ರದಲ್ಲೇ ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಹೇಳಿದರು.
ರೋಹಿತ್ ಅವರ ಈ ಮಾಹಿತಿಯಿಂದ ಅಯ್ಯರ್ ಅವರು ಮಾರ್ಚ್ 17 ರಿಂದ ಆಸೀಸ್ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾದಂತಿದೆ. ಬಿಸಿಸಿಐ ಮೂಲಗಳ ಪ್ರಕಾರ ಶ್ರೇಯಸ್ ಅಯ್ಯರ್ ಚೇತರಿಕೆಗೆ ಮೂರು ವಾರಗಳ ಅಗತ್ಯವಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಶ್ರೇಯಸ್ ಮೂರು ವಾರಗಳ ಕಾಲ ವಿಶ್ರಾಂತಿ ಪಡೆದರೆ ಐಪಿಎಲ್ನ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯೂ ದಟ್ಟವಾಗಿದೆ. ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದಾರೆ.