ಬೆಂಗಳೂರು: ಭಾರತ(IND VS AUS) ವಿರುದ್ಧದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ(border gavaskar trophy) ಟೆಸ್ಟ್ ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾ ಮತ್ತು ಭಾರತ ತಂಡ ಅಭ್ಯಾಸ ಆರಂಭಿಸಿದೆ. ಉಭಯ ತಂಡಗಳ ಮೊದಲ ಮುಖಾಮುಖಿ ಫೆ.9 ನಾಗ್ಪುರದಲ್ಲಿ ನಡೆಯಲಿದೆ.
ಅತಿಥೇಯ ಭಾರತ ತಂಡದ ಸ್ಪಿನ್ನರ್ಗಳ ಕಠಿಣ ಸವಾಲನ್ನು ಸಮರ್ಥವಾಗಿ ಎದುರಿಸಲು ಆಸ್ಟ್ರೇಲಿಯಾ ತಂಡದ ಆಟಗಾರರು ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಸಮರ್ಥ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಗಮನಸೆಳೆದದ್ದು 21 ವರ್ಷದ ಮಹೀಶ್ ಪಿಥಿಯಾ(mahesh pithiya).
ಆರ್. ಅಶ್ವಿನ್(r ashwin) ಶೈಲಿಯಲ್ಲಿ ಆಫ್ ಸ್ಪಿನ್ ಬೌಲಿಂಗ್ ಮಾಡುವ ಮಹೀಶ್ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಆಸೀಸ್ ಆಟಗಾರರು ಅಶ್ವಿನ್ ಅವರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗುತ್ತಿದ್ದಾರೆ.
ಗುಜರಾತ್ ಮೂಲದ ಮಹೀಶ್ ಪಿಥಿಯಾ ಅವರು ರೈತ ಕುಟುಂಬದಿಂದ ಬಂದ ಆಟಗಾರನಾಗಿದ್ದು ಅಶ್ವಿನ್ ಅವರಿಂದ ಸ್ಫೂರ್ತಿ ಪಡೆದು ಬೌಲಿಂಗ್ ಆರಂಭಿಸಿದ್ದಲ್ಲದೆ ಅವರದೇ ಶೇಲಿಯನ್ನು ಅನುಕರಿಸುತ್ತಾರೆ. ಜತೆಗೆ ನೆಟ್ಸ್ನಲ್ಲಿ ಆಸೀಸ್ ತಂಡದ ಸ್ಟಾರ್ ಆಟಗಾರರಾದ ಸ್ಟೀವನ್ ಸ್ಮಿತ್(steve smith), ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಸೇರಿ ಪ್ರಮುಖ ಬ್ಯಾಟರ್ಗಳನ್ನು ತಮ್ಮ ಸ್ಪಿನ್ ದಾಳಿಯ ಮೂಲಕ ಕಾಡಿದ್ದಾರೆ. ಮಹೀಶ್ ಪಿಥಿಯಾ ಕಳೆದ ಡಿಸೆಂಬರ್ನಲ್ಲಿ ಬರೋಡ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಮೆಚ್ಚುಗೆ ವ್ಯಕ್ತಪಡಿಸಿದ ಸ್ಟೀವನ್ ಸ್ಮಿತ್
ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅನುಭವ ಇಲ್ಲದಿದ್ದರೂ ಮಹೀಶ್ ಪಿಥಿಯಾ ಶ್ರೇಷ್ಠ ಮಟ್ಟದ ಬೌಲಿಂಗ್ ಮೂಲಕ ನಮ್ಮ ತಂಡದ ಬ್ಯಾಟರ್ಗಳನ್ನು ಕಾಡಿದ್ದಾರೆ. ಮಹೀಶ್ ಮುಂದಿನ ದಿನದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳುವ ಸಂಪೂರ್ಣ ವಿಶ್ವಾಸವಿದೆ ಎಂದು ಸ್ಟೀವನ್ ಸ್ಮಿತ್ ಹೇಳಿದ್ದಾರೆ. ಆರ್. ಅಶ್ವಿನ್ ಅವರ ರೂಪದಲ್ಲಿ ಮಹೀಶ್ ಪಿಥಿಯಾ ಭಾರತ ತಂಡಕ್ಕೆ ಎಂಟ್ರಿಕೊಡುವ ಮೂಲಕ ಹಲವು ದಾಖಲೆ ಬರೆಯಲಿದ್ದಾರೆ ಎಂದು ಸ್ಮಿತ್ ಅವರು ಭವಿಷ್ಯ ನುಡಿದಿದ್ದಾರೆ.