ನಾಗ್ಪುರ: ಟೀಮ್ ಇಂಡಿಯಾ ಆಸ್ಟ್ರೇಲಿಯಾ(IND VS AUS) ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಸಜ್ಜಾಗಿದೆ. ಇದರ ನಡುವೆ ಹೋಟೆಲ್ ಸಿಬ್ಬಂದಿಯಿಂದ ಹಣೆಗೆ ತಿಲಕ ಇಡಲು ನಿರಾಕರಿಸಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್(vikram rathore), ವೇಗಿಗಳಾದ ಮೊಹಮ್ಮದ್ ಸಿರಾಜ್(mohammed siraj) ಹಾಗೂ ಉಮ್ರಾನ್ ಮಲಿಕ್(umran malik) ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ಮತ್ತು ವಿರೋಧದ ಚರ್ಚೆಗಳು ಆರಂಭವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಈಗಾಗಲೇ ಭಾರತ ತಂಡದ ಆಟಗಾರರು ನಾಗ್ಪುರ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ. ಈ ಮಧ್ಯೆ ಸಿರಾಜ್, ಉಮ್ರಾನ್ ಮುಲಿಕ್ ಸೇರಿ ವಿಕ್ರಮ್ ರಾಥೋಡ್ ಹೋಟೆಲ್ಗೆ ಬಂದ ವೇಳೆ ಹಣೆಗೆ ತಿಲಕ ಇಡಲು ನಿರಾಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಹೋಟೆಲ್ ಸಿಬ್ಬಂದಿ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದರು. ಅದರಂತೆ ನಾಯಕ ರೋಹಿತ್ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಬಹುತೇಕ ಸದಸ್ಯರು ಹಣೆಗೆ ತಿಲಕವನ್ನು ಇಟ್ಟುಕೊಂಡರು. ಆದರೆ, ವಿಕ್ರಮ್ ರಾಥೋಡ್, ಮೊಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ಅವರು ಹೋಟೆಲ್ ಸಿಬ್ಬಂದಿಯಿಂದ ಹಣೆಗೆ ತಿಲಕ ಇಟ್ಟುಕೊಳ್ಳಲು ನಿರಾಕರಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊ ವೈರಲ್ ಆಗುತಿದ್ದಂತೆ ಕೆಲ ನೆಟ್ಟಿಗರು “ಧರ್ಮದ ಅನುಸಾರವಾಗಿ ಮೊಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ತಿಲಕ ಇಡುವುದನ್ನು ನಿರಾಕರಿದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮತ್ತು ಸಹಾಯಕ ಸಿಬ್ಬಂದಿ ತಿಲಕ ಇಡುವುದನ್ನು ಏಕೆ ನಿರಾಕರಿಸಿದ್ದಾರೆ. ಇದು ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಭಾರತವನ್ನು ಪ್ರತಿನಿಧಿಸುವಾಗ ಸಿರಾಜ್, ಉಮ್ರಾನ್ ಮಲಿಕ್ ತಿಲಕ ಇಡುವುದರಲ್ಲಿ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ.
ಹಳೆಯ ವಿಡಿಯೊ
ಇದು ಹಳೆಯ ವೀಡಿಯೊದಂತೆ ಕಾಣಿಸುತ್ತಿದೆ. ಏಕೆಂದರೆ ಉಮ್ರಾನ್ ಮಲಿಕ್ ಆಸ್ಟ್ರೇಲಿಯಾ ಸರಣಿಯ ಟೆಸ್ಟ್ ತಂಡದ ಭಾಗವಾಗಿಲ್ಲ. ಇದು ಇತ್ತೀಚೆಗೆ ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ನಡೆದ ಘಟನೆ ಎಂದು ಹೇಳಲಾಗಿದೆ. ದರ್ಮದ ಕಿಚ್ಚು ಹಚ್ಚುವ ಸಲುವಾಗಿ ಈ ವಿಡಿಯೊವನ್ನು ಆಸೀಸ್ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬಳಸಿಕೊಂಡು ಕೆಲ ನೆಟ್ಟಿಗರು ಅನಾವಶ್ಯಕವಾಗಿ ಈ ವಿಡಿಯೊವನ್ನು ಶೆರ್ ಮಾಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.