ಇಂದೋರ್: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ(IND VS AUS) ತಂಡವು ಅಲ್ಪಮೊತ್ತಕ್ಕೆ ಆಲೌಟಾಗಿದೆ. ಆಸ್ಟ್ರೇಲಿಯಾದ ಸ್ಪಿನ್ ಮ್ಯಾಜಿಕ್ಗೆ ತಿಣುಕಾಡಿದ ರೋಹಿತ್ ಪಡೆ ಕೇವಲ 109 ರನ್ ಗಳಿಗೆ ಸರ್ವಪತನ ಕಂಡಿತು. ಆದರೆ ಈ ಪಂದ್ಯದಲ್ಲಿ ಹಲವು ಜೀವದಾನ ಪಡೆದ ಟೀಮ್ ಇಂಡಿಯಾ ಆಟಗಾರರು ಇದರ ಲಾಭವೆತ್ತದ ಕುರಿತು ಸಾಮಾಜಿಕ ಜಾಲತಣದಲ್ಲಿ ಟೀಕೆಗಳು ವ್ಯಕ್ತವಾಗಿದೆ.
ಟಾಸ್ ಗೆದ್ದು ಭಾರತದ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲ ಮೊದಲ ಓವರಿನಲ್ಲಿಯೇ ಔಟಾಗಬೇಕಾಗಿತ್ತು. ಆದರೆ ಆಸೀಸ್ ಆಟಗಾರರ ನಿರ್ಲಕ್ಷ್ಯದಿಂದ ಬದುಕುಳಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿಯೇ ರೋಹಿತ್ ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಒಂದೊಮ್ಮೆ ನಾಯಕ ಸ್ಮಿತ್ ರಿವ್ಯೂ ತೆಗೆದುಕೊಳ್ಳುತ್ತಿದ್ದರೆ ರೋಹಿತ್ ಔಟಾಗಬೇಕಿತ್ತು. ಈ ಮೂಲಕ ರೋಹಿತ್ ಬಚಾವಾದರು.
ಇದೇ ಓವರ್ನ 4ನೇ ಎಸೆತದಲ್ಲಿ ರೋಹಿತ್ ಮತ್ತೆ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ಆದರೆ ಇಲ್ಲೂ ಆಸೀಸ್ ಆಟಗಾರರು ತಮ್ಮ ನಿರ್ಲಕ್ಷ್ಯತನ ತೋರುವ ಮೂಲಕ ರೋಹಿತ್ಗೆ ಮತ್ತೊಂದು ಜೀವದಾನ ನೀಡಿದರು. ಸಿಕ್ಕ ಈ 2 ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳದ ರೋಹಿತ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆತದಲ್ಲಿ ಬೀಸಿ ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಕೇವಲ 12 ರನ್ಗಳಿಗೆ ತಮ್ಮ ಇನಿಂಗ್ಸ್ ಮುಗಿಸಿದರು.
ಇದಾದ ಬಳಿಕ ರವೀಂದ್ರ ಜಡೇಜಾ ಅವರು ಕೂಡ ನಥಾನ್ ಲಿಯೋನ್ ಎಸೆತದಲ್ಲಿ ಎಲ್ ಬಿಡಬ್ಲ್ಯೂಗೆ ಔಟಾದರು. ಆದರೆ ರಿವ್ಯೂ ಮೂಲಕ ಬಚಾವಾದರು. ಆದರೆ ಮುಂದಿನ ಎಸೆತದಲ್ಲೇ ಕ್ಯಾಚ್ ನೀಡಿ ಆಟ ಮುಗಿಸಿದರು. ಇದನ್ನು ಕಂಡ ನೆಟ್ಟಿಗರು ಸರಣಿ ಟ್ವೀಟ್ ಮೂಲಕ ಭಾರತೀಯ ಆಟಗಾರರ ಈ ಕಳಪೆ ಪ್ರದರ್ಶನಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.