ಚೆನ್ನೈ: ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ರಣಜಿ ಪಂದ್ಯವನ್ನಾಡಲು ಚೆನ್ನೈ ತಲುಪಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಜಡೇಜಾ ಸೌರಾಷ್ಟ್ರ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಭಾನುವಾರ ಚೆನ್ನೈ ತಲುಪಿರುವ ಜಡೇಜಾ ಸೌರಾಷ್ಟ್ರ ತಂಡವನ್ನು ಸೇರಿಕೊಂಡಿದ್ದಾರೆ. ಚೆನ್ನೈಗೆ ಬಂದಿಳಿದ ವಿಚಾರವನ್ನು ಜಡೇಜಾ “ನಮಸ್ಕಾರ ಚೆನ್ನೈ” ಎಂದು ಟ್ವಿಟರ್ನಲ್ಲಿ ಪೋಸ್ಟ್ ಹಾಕುವ ಮೂಲಕ ಖಚಿತಪಡಿಸಿದ್ದಾರೆ. ಆಸೀಸ್ ವಿರುದ್ಧದ ತವರಿನ ಟೆಸ್ಟ್ ಸರಣಿಗಾಗಿ ತಮ್ಮ ಫಿಟ್‌ನೆಸ್ ಸಾಬೀತು ಪಡಿಸಲು ಈ ಪಂದ್ಯ ಜಡೇಜಾಗೆ ಉತ್ತಮ ಅವಕಾಶವಾಗಿದೆ. ಜಡೇಜಾ 2018ರ ಬಳಿಕ ಇದೇ ಮೊದಲ ಬಾರಿಗೆ ರಣಜಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಜಡೇಜಾ ನೆಟ್ಸ್ನಲ್ಲಿ ಕಠಿಣ ಬೌಲಿಂಗ್ ಅಭ್ಯಾಸ ನಡೆಸಿದ್ದ ವಿಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಭಾರತ ಆಸ್ಟ್ರೇಲಿಯಾ ನಡುವಿನ ಪ್ರತಿಷ್ಟಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗಾಗಿ ಜಡೇಜಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಅವರು ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ತಮ್ಮ ಫಿಟ್‌ನೆಸ್ ಸಾಬೀತು ಪಡಿಸಬೇಕಿದೆ. ಇದಕ್ಕಾಗಿ ಜಡೇಜಾ ರಣಜಿ ಟ್ರೋಫಿ ಪಂದ್ಯವನ್ನಾಡುವ ಮೂಲಕ ಫಿಟ್‌ನೆಸ್ ಸಾಬೀತು ಪಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ | Ravindra Jadeja | ಬೌಲಿಂಗ್ ಅಭ್ಯಾಸ ಆರಂಭಿಸಿದ ರವೀಂದ್ರ ಜಡೇಜಾ, ಟೆಸ್ಟ್ಗೆ ಮೊದಲು ಫುಲ್ ಫಿಟ್?