ಸೇಂಟ್ ಲೂಸಿಯಾ: ಅಫಘಾನಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡಿರುವ ಆಸ್ಟ್ರೇಲಿಯಾ, ನಾಳೆ ನಡೆಯುವ ಅಂತಿಮ ಸೂಪರ್-8 ಪಂದ್ಯದಲ್ಲಿ ಭಾರತ(IND vs AUS) ವಿರುದ್ಧ ಕಣಕ್ಕಿಳಿಯಲಿದೆ. ಸೆಮಿಫೈನಲ್(T20 World Cup 2024) ಪ್ರವೇಶಿಸಬೇಕಿದ್ದರೆ ಆಸ್ಟ್ರೇಲಿಯಾಕ್ಕೆ(India vs Australia) ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಭಾರತಕ್ಕೂ ಸೆಮಿ ಟಿಕೆಟ್ ಅಧಿಕೃತಗೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಆದರೆ, ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.
ಸೂಪರ್ 8 ಹಂತದ ವೇಳಾಪಟ್ಟಿ ಪ್ರಕಟಿಸುವ ವೇಳೆಯೇ ಭಾರತ ಮತ್ತು ಆಸೀಸ್ ನಡುವಣ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಹೌದು, ಗ್ರಾಸ್ ಐಲೆಟ್ನಲ್ಲಿ(Saint Lucia latest weather) ನಡೆಯಲಿರುವ ಭಾರತ-ಆಸೀಸ್(Australia vs India) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭಾರೀ ಮಳೆಯಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.
ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಪಂದ್ಯ ರದ್ದಾದರೆ ಭಾರತಕ್ಕೆ ಲಾಭವಾಗಲಿದೆ. ಆದರೆ ಆಸೀಸ್ಗೆ ಇದು ಭಾರೀ ನಷ್ಟವಾಗಲಿದೆ. ಬಾಂಗ್ಲಾ ವಿರುದ್ಧ ಅಫಘಾನಿಸ್ತಾನ ಗೆದ್ದರೆ, ಆಸೀಸ್ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಇದನ್ನೂ ಓದಿ Shreyasi Singh: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ ಬಿಜೆಪಿ ಶಾಸಕಿ
ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಮೀಸಲು ದಿನಗಳು ಜಾರಿಯಲ್ಲಿವೆ. ಒಂದೊಮ್ಮೆ ಮಳೆಯಿಂದ ಮೀಸಲು ದಿನವೂ ಸೆಮಿಫೈನಲ್ ಪಂದ್ಯ ನಡೆಯದಿದ್ದರೆ ಆಗ ರನ್ ರೇಟ್ ಆಧಾರದಲ್ಲಿ ಮುಂದಿರುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಫೈನಲ್ನ ಮೀಸಲು ದಿನವೂ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ವಿಜಯೀ ಎಂದು ನಿರ್ಧರಿಸಲಾಗುತ್ತದೆ.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 3 ಪಂದ್ಯ ಗೆದ್ದರೆ, ಆಸೀಸ್ 2 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಕಳೆದ 2 ಬಾರಿಯ ಮುಖಾಮುಖಿಯಲ್ಲಿಯೂ ಭಾರತವೇ ಗೆದ್ದು ಬೀಗಿದೆ. ಹೀಗಾಗಿ ಭಾರತ ಬಲಿಷ್ಠ ಎನ್ನಬಹುದು. ಒಟ್ಟಾರೆಯಾಗಿ ಟಿ20 ಕ್ರಿಕೆಟ್ನಲ್ಲಿ ಇತ್ತಂಡಗಳು 31 ಪಂದ್ಯಗಳಲ್ಲಿ ಆಡಿವೆ. ಇದರಲ್ಲಿ ಭಾರತ 19 ಪಂದ್ಯ ಮತ್ತು ಆಸ್ಟ್ರೇಲಿಯ 17 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.
ಆಫ್ಘಾನ್ ವಿರುದ್ಧ ಆಸೀಸ್ಗೆ ಹೀನಾಯ ಸೋಲು
ಇಂದು (ಭಾನುವಾರ) ನಡೆದ ಸೂಪರ್-8 ಪಂದ್ಯದಲ್ಲಿ ಅಫಘಾನಿಸ್ತಾನ ಬಲಿಷ್ಠ ಆಸ್ಟ್ರೇಲಿಯಾವನ್ನು 21 ರನ್ಗಳಿಂದ ಮಗುಚಿ ಹಾಕಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ. ಈ ಗೆಲುವಿನೊಂದಿಗೆ ರಶೀದ್ ಖಾನ್ ಪಡೆಯ ಸೆಮಿ ಆಸೆ ಕೂಡ ಜೀವಂತವಾಗಿದೆ. ಇದು ಆಸೀಸ್ ವಿರುದ್ಧ ಅಫಘಾನಿಸ್ತಾನಕ್ಕೆ ಒಲಿದ ಮೊದಲ ಗೆಲುವು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ತಂಡ ಕಮಿನ್ಸ್ ಅವರ ಬೌಲಿಂಗ್ ದಾಳಿಯ ಮಧ್ಯೆಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅರ್ಧಶತಕದ ಹೊರತಾಗಿಯೂ 127 ರನ್ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಈ ಗೆಲುವಿನೊಂದಿಗೆ ಆಫ್ಘಾನ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡಿತು. ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಮೈದಾನದಲ್ಲಿ ಆಡಿದ 4ಕ್ಕೂ ಪಂದ್ಯಗಳನ್ನು ಕೂಡ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದು ಬೀಗಿತು.