ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ನಡೆಸಿ ಗಮನಸೆಳೆದ ಚೇತೇಶ್ವರ್ ಪೂಜಾರಗೆ(Cheteshwar Pujara) ಆರ್.ಅಶ್ವಿನ್(Ravichandran Ashwin) ಮೆಚ್ಚುಗೆಯ ವ್ಯಕ್ತಪಡಿಸುವ ಜತೆಗೆ ಕಾಲೆಳೆದಿದ್ದಾರೆ.
ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಗೆಲುವು ದಾಖಲಿಸಿ ಸರಣಿ ಜಯ ಕಂಡಿದೆ. ಅಂತಿಮ ದಿನಾದಟದಲ್ಲಿ ಪಂದ್ಯ ಡ್ರಾಗೊಳ್ಳುವುದು ಖಚಿತವಾದ ಕಾರಣ ರೋಹಿತ್ ಶರ್ಮಾ ಶುಭಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ಬೌಲಿಂಗ್ ನಡೆಸುವ ಅವಕಾಶ ನೀಡಿದರು.
ಉಭಯ ಆಟಗಾರರು ಸ್ಪಿನ್ ಬೌಲಿಂಗ್ ಮೂಲಕ ಗಮನಸೆಳೆದರು. ಅದರಲ್ಲೂ ಚೇತೇಶ್ವರ್ ಪೂಜಾರ ಅವರ ಬೌಲಿಂಗ್ ಕಂಡ ಆರ್. ಅಶ್ವಿನ್ ಪಂದ್ಯ ಮುಕ್ತಾಯದ ಬಳಿಕ ಪೂಜಾರ ಬೌಲಿಂಗ್ ನಡೆಸುತ್ತಿರುವ ಫೋಟೊವನ್ನು ಟ್ವಿಟರ್ನಲ್ಲಿ ಪ್ರಕಟಸಿ ‘ನಾನೇನು ಮಾಡಲಿ ? ಕೆಲಸ ಬಿಡಬೇಕೇ ?’ ಎಂದು ತಮಾಷೆಯಾಗಿ ಪೂಜಾರ ಅವರ ಕಾಲೆಳೆದಿದ್ದಾರೆ.
ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದ ಪೂಜಾರ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದನ್ನು ಉಲ್ಲೇಖಿಸಿ ‘ಕೆಲಸ ಬಿಡುವುದು ಬೇಡ. ನೀವು ನಾಗ್ಪುರದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವುದಕ್ಕೆ ಈ ಮೂಲಕ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದ್ದಾರೆ. ಈ ಇಬ್ಬರ ತಮಾಷೆಯ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹಮದಾಬಾದ್ನಲ್ಲಿ ನಡೆದ ಈ ಪಂದ್ಯದಲ್ಲಿ ಆರ್. ಅಶ್ವಿನ್ ಮೊದಲ ಇನಿಂಗ್ಸ್ನಲ್ಲಿ 6 ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಉರುಳಿಸಿ ಒಟ್ಟು ಏಳು ವಿಕೆಟ್ ಪಡೆದ ಸಾಧನೆ ಮಾಡಿದರು. ಆಡಿದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಸರಣಿಶ್ರೇಷ್ಠ ಪ್ರಶಸ್ತಿಗೂ ಅಶ್ವಿನ್ ಪಾತ್ರರಾದರು.