ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರನೇ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ. ಆಸ್ಟ್ರೇಲಿಯಾದ ಗುರಿ ಬೆನ್ನಟ್ಟಲು ಭಾರತ ತಂಡ ಇನ್ನೂ 191 ರನ್ಗಳ ಹಿನ್ನಡೆಯಲ್ಲಿದ್ದು, ಎರಡು ದಿನಗಳ ಆಟ ಬಾಕಿಯಿದೆ.
ನ್ಯೂ ಬ್ಯಾಟಿಂಗ್ ಸೆನ್ಷೇಷನಲ್ ಶುಭಮನ್ ಗಿಲ್(128) ಅವರ ಶತಕ ಮತ್ತು ವಿರಾಟ್ ಕೊಹ್ಲಿ(59*) ಅವರ ಅಜೇಯ ಅರ್ಧಶತಕ ಮೂರನೇ ದಿನದಾಟದ ವಿಶೇಷವಾಗಿತ್ತು. ಭಾರತ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದಲ್ಲಿಂದ ಶನಿವಾರ ಆಟ ಮುಂದುವರಿಸಿತು. ಮೂರನೇ ದಿನದಾಟದಲ್ಲಿ ರೋಹಿತ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಆದರೆ ರೋಹಿತ್ 35 ರನ್ ಗಳಿಸಿದ ವೇಳೆ ಮ್ಯಾಥ್ಯೂ ಕುಹ್ನೆಮನ್ಗೆ ವಿಕೆಟ್ ಒಪ್ಪಿಸಿದರು.
ರೋಹಿತ್ ವಿಕೆಟ್ ಪತನದ ಬಳಿಕ ಆಡಲಿಳಿದ ಚೇತೇಶ್ವರ್ ಪೂಜಾರ ಗಿಲ್ ಜತೆಗೂಡಿ ಉತ್ತಮ ಜತೆಯಾಟ ನಡೆಸಿದರು. ಈ ವೇಳೆ ಶುಭಮನ್ ಗಿಲ್ ಶತಕ ಸಿಡಿಸಿ ಮಿಂಚಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ದ್ವಿತೀಯ ಶತಕವಾಗಿದೆ. ಗಿಲ್ ಒಟ್ಟು 235 ಎಸೆತ ಎದುರಿಸಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 128 ರನ್ ಬಾರಿಸಿದರು.
ಚೇತೇಶ್ವರ್ ಪೂಜಾರ 42 ರನ್ಗೆ ಔಟಾಗುವ ಮೂಲಕ ಕೇವಲ 8 ರನ್ ಅಂತರದಲ್ಲಿ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಭಾರತದ ಮೂರೂ ವಿಕೆಟ್ಗಳು ಸ್ಪಿನ್ನರ್ ಪಾಲಾಯಿತು. ಸದ್ಯ ವಿರಾಟ್ ಕೊಹ್ಲಿ ಅಜೇಯ 59 ಮತ್ತು ರವೀಂದ್ರ ಜಡೇಜಾ 16 ರನ್ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ IND VS AUS: ಒಂದೇ ಇನಿಂಗ್ಸ್ನಲ್ಲಿ 2 ದಾಖಲೆ ಬರೆದ ರೋಹಿತ್ ಶರ್ಮಾ; ಏನದು?
ಕಳೆದ ಕೆಲ ವರ್ಷಗಳಿಂದ ಟೆಸ್ಟ್ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿ ಶತಕ ಬಾರಿಸುವ ಸೂಚನೆಯೊಂದನ್ನು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಟೆಸ್ಟ್ ಡ್ರಾಗೊಳ್ಳುವತ್ತ ಸಾಗಿದೆ.