ಅಹಮದಾಬಾದ್: ಆಸ್ಟ್ರೇಲಿಯಾ(IND VS AUS) ವಿರುದ್ಧ ಇಂದೋರ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಭಾರತ ಇದೀಗ ನಾಲ್ಕನೇ ಮತ್ತು ಸರಣಿಯ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ತಂಡದಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆಯಲು ಭಾರತಕ್ಕೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಹೀಗಾಗಿ ಭಾರತ ಈ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ನಡೆಸಲು ಮುಂದಾಗಿದೆ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಹೊಣೆ ಹೊತ್ತ ಶ್ರೀಕರ್ ಭರತ್(srikar bharat) ಆಡಿದ ಮೂರು ಪಂದ್ಯಗಳಲ್ಲಿಯೂ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲ ಕಂಡಿದ್ದಾರೆ. ಹೀಗಾಗಿ ಇವರ ಸ್ಥಾನಕ್ಕೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಶಾನ್ ಕಿಶನ್(ishan kishan) ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಕಾರಣ ತಂಡದ ಮೊತ್ತಕ್ಕೂ ಲಾಭವಾಗುತ್ತದೆ, ಈ ನಿಟ್ಟಿನಲ್ಲಿ ಅವರಿಗೆ ಈ ಪಂದ್ಯದಲ್ಲಿ ಸ್ಥಾನ ನೀಡುವುದು ಖಚಿತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ Team India : ಡಬ್ಲ್ಯುಟಿಸಿ ಫೈನಲ್ಗೆ ಉಮೇಶ್ ಯಾದವ್ ಸೂಕ್ತ ಎಂದ ಮಾಜಿ ಕ್ರಿಕೆಟಿಗ!
ಶ್ರೇಯಸ್ ಅಯ್ಯರ್ ಅವರಿಗೂ ಈ ಪಂದ್ಯದಿಂದ ಕೊಕ್ ನೀಡುವ ಸಾಧ್ಯತೆ ಇದೆ. ಅವರ ಬದಲಿಗೆ ಕೆ.ಎಲ್. ರಾಹುಲ್ ಅಥವಾ ಸೂರ್ಯಕುಮಾರ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗಬಹುದು ಎಂದು ವರದಿಯಾಗಿದೆ.