Site icon Vistara News

ಇಂಡೋ-ಆಸೀಸ್​ ಮೊದಲ ಟಿ20 ಪಂದ್ಯದ ಪಿಚ್​ ರಿಪೋರ್ಟ್​,ಹವಾಮಾನ ವರದಿ ಹೇಗಿದೆ?

ACA-VDCA Cricket Stadium Visakhapatnam

ವಿಶಾಖಪಟ್ಟಣ: ಏಕದಿನ ವಿಶ್ವಕಪ್ ಸೋಲಿನ ಆಘಾತದ ಮಧ್ಯೆಯೂ ಆಸ್ಟ್ರೇಲಿಯಾ(IND vs AUS T20) ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ತಂಡ ಸಿದ್ಧವಾಗಿದೆ. ಇತ್ತಂಡಗಳ ನಡುವಣ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಈ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಮೈದಾನದಲ್ಲಿ ಇದುವರೆಗೆ ಕೇವಲ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದೆ. ವಿಶೇಷವೆಂದರೆ ಎರಡೂ ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಕಡಿಮೆ ಮೊತ್ತಕ್ಕೆ ಹೆಸರಾದ ಈ ಕ್ರೀಡಾಂಗಣದಲ್ಲಿ ಬೌಲರ್​ಗಳೇ ಪಾರುಪತ್ಯ ಸಾಧಿಸಿದ್ದಾರೆ. ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತು ಕೇವಲ 104 ರನ್. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 127 ರನ್.

2019ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ಮೊದಲ ಟಿ20 ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಏಳು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದರೆ, ಚೇಸ್ ಮಾಡಿದ್ದ ಆಸೀಸ್ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. 2016ರಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಟಿ20 ಪಂದ್ಯವಾಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ಕೇವಲ 82 ರನ್ ಗೆ ಆಲೌಟಾಗಿತ್ತು. ಭಾರತ ತಂಡ ಈ ಸುಲಭ ಗುರಿಯನ್ನು 13.5 ಓವರ್ ಗಳಲ್ಲಿ ತಲುಪಿತ್ತು.

ಮುಖಾಮುಖಿ

ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ ಒಟ್ಟು 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ ಜಯ ಕಂಡಿದೆ. ಒಂದು ಪಂದ್ಯ ರದ್ದು ಗೊಂಡಿದೆ. ತವರಿನಲ್ಲಿ ಭಾರತ 6 ಪಂದ್ಯ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಬಹುದು. ಆದರೆ ಈ ಬಾರಿ ತಂಡದಲ್ಲಿ ಅನುಭವಿ ಆಟಗಾರರು ಕಾಣಿಸಿಕೊಂಡಿಲ್ಲ. ಹೀಗಾಗಿ ಐಪಿಎಲ್​ ಆಡಿದ ಯುವ ಆಟಗಾರು ಹಾಲಿ ವಿಶ್ವ ಚಾಂಪಿಯನ್​ ಆಸೀಸ್​ ಸವಾಲು ಮೆಟ್ಟಿ ನಿಲ್ಲಬಲ್ಲರೇ ಎನ್ನುವುದು ಸರಣಿಯ ಕುತೂಹಲ.

ಇದನ್ನೂ ಓದಿ ICC ODI Rankings: ಅಗ್ರಸ್ಥಾನದ ಸನಿಹಕ್ಕೆ ವಿರಾಟ್​​ ಕೊಹ್ಲಿ; ಸಿರಾಜ್​ ಮತ್ತೆ ಕುಸಿತ

ಹವಾಮಾನ ವರದಿ

ಅಕ್ಯುವೆದರ್ ಪ್ರಕಾರ ಪಂದ್ಯ ನಡಯುವ ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ಶೇ.60 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಪಂದ್ಯ ಸಂಜೆ 7 ರಿಂದ ಆರಂಭವಾಗುವ ಕಾರಣ ರಾತ್ರಿ ಮಳೆ ಸಾಧ್ಯತೆ ಅಧಿಕವಾಗಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ಆಡಲು ಸಾಧ್ಯವಾಗದಿದ್ದರೆ ದ್ವಿಪಕ್ಷೀಯ ಸರಣಿ ಆದ ಕಾರಣ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ.

ಸಂಭಾವ್ಯ ತಂಡ

ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ (ನಾಯಕ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್​ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ, ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಕೇನ್ ರಿಚರ್ಡ್‌ಸನ್.

ಇದನ್ನೂ ಓದಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮ್ಯಾನೇಜರ್ ಮಂಗಳೂರಿನ ಯುವತಿ

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶದೀಪ್​ ಸಿಂಗ್​, ಪ್ರಸಿದ್ ಕೃಷ್ಣ.

Exit mobile version