Site icon Vistara News

IND vs AUS T20: ವಿಶ್ವ ಚಾಂಪಿಯನ್ನರಿಗೆ ಸವಾಲೊಡ್ಡೀತೇ ಯಂಗ್​ ಟೀಮ್ ಇಂಡಿಯಾ?

TeamIndia’s squad for T20I series against Australia

ವಿಶಾಖಪಟ್ಟಣ: ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿದ ಆಸ್ಟ್ರೇಲಿಯಾ ತಂಡ ಇನ್ನೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದೆ. ಸೂರ್ಯಕುಮಾರ್​ ಯಾದವ್​ ಅವರ ಸಾರಥ್ಯದಲ್ಲಿ ಐಪಿಎಲ್‌ ಹೀರೊಗಳೆಲ್ಲ ಬಲಿಷ್ಠ ಆಸ್ಟ್ರೇಲಿಯದ ಎದುರು ಟಿ20 ಸರಣಿಯಲ್ಲಿ(IND vs AUS T20) ಸಿಡಿದು ನಿಲ್ಲುವ ತುಡಿತದಲ್ಲಿದ್ದಾರೆ. ಆದರೆ, ಇದು ಸಾಧವೇ? ಪ್ರಶ್ನೆ ಸಹಜ.

ಸೂರ್ಯಕುಮಾರ್‌ ಅವರು ಟಿ20 ಸ್ಪೆಷಲಿಸ್ಟ್‌ ನಿಜ. ಆದರೆ ಅವರು ಏಕದಿನ ವಿಶ್ವಕಪ್​ನಲ್ಲಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಹೀಗಾಗಿ ಈ ಸರಣಿಯಲ್ಲಿ ಅವರಿಗೆ ನಾಯಕತ್ವ ನೀಡಿದ್ದು ಕೆಲ ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಜತೆಗೆ ಬಲಿಷ್ಠ ಆಸೀಸ್​ ವಿರುದ್ಧದ ಸರಣಿಗೆ ಅನಾನುಭವಿ ಆಟಗಾರರನ್ನೇ ಆಯ್ಕೆ ಮಾಡಿದ್ದು ಕೂಡ ಅಸಾಮಾಧನ ಮೂಡಿಸುವಂತೆ ಮಾಡಿದೆ. ಆದರೆ ಹಿರಿಯ ಆಟಗಾರರನ್ನೇ ನೆಚ್ಚಿ ಕುಳಿತುಕೊಂಡರೆ ಆಗದು ಎಂಬ ದೃಢ ನಿರ್ಧಾರ ಕೈಗೊಂಡ ಆಯ್ಕೆ ಸಮಿತಿ ಯುವ ಆಟಗಾರರಿಗೆ ಅವಕಾಶ ನೀಡಿ ಪ್ರಯೋಗ ನಡೆಸಲು ಮುಂದಾಗಿದೆ.

ಇದನ್ನೂ ಓದಿ ಇಂಡೋ-ಆಸೀಸ್​ ಮೊದಲ ಟಿ20 ಪಂದ್ಯದ ಪಿಚ್​ ರಿಪೋರ್ಟ್​,ಹವಾಮಾನ ವರದಿ ಹೇಗಿದೆ?

ಟಿ20 ವಿಶ್ವಕಪ್​ಗೆ ಉತ್ತಮ ತಯಾರಿ

ಮುಂದಿನ ವರ್ಷ ಟಿ20 ವಿಶ್ವಕಪ್​ ಇರುವ ಕಾರಣ ಈ ಸರಣಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮ, ರಿಂಕು ಸಿಂಗ್​, ರವಿ ಬಿಷ್ಟೋಯಿ ಸೇರಿ ಕೆಲ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ತಂಡದಲ್ಲಿ ಖಾಯಂ ಸ್ಥಾನ ಪಡೆಯಬಹುದು. ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಡೇಜಾ, ಶಮಿ ಸೇರಿ ಕೆಲ ಆಟಗಾರರ ಟಿ20 ಕ್ರಿಕೆಟ್ ಬಹುತೇಕ ಮುಗಿದಂತಿದೆ. ಕಳೆದ ಹಲವು ಸರಣಿಗಳಲ್ಲಿಯೂ ಇವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಹೀಗಾಗಿ ಯುವ ಆಟಗಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕಿದೆ.​

ಇದನ್ನೂ ಓದಿ ICC ODI Rankings: ಅಗ್ರಸ್ಥಾನದ ಸನಿಹಕ್ಕೆ ವಿರಾಟ್​​ ಕೊಹ್ಲಿ; ಸಿರಾಜ್​ ಮತ್ತೆ ಕುಸಿತ

ಆಸೀಸ್​ ಬಲಿಷ್ಠ

ಭಾರತ ತಂಡಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠ ಎನ್ನುವುದರಲ್ಲಿ ಅನುಮಾನವೇ ಬೇಡ. ಈ ತಂಡದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚಿನ ವಿಶ್ವಕಪ್‌ ಹೀರೋಗಳಿದ್ದಾರೆ. ಟ್ರಾವಿಸ್‌ ಹೆಡ್‌, ಗ್ಲೆನ್​ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿ ನಿಸ್‌, ಸ್ಟೀವನ್‌ ಸ್ಮಿತ್‌, ಜೋಶ್‌ ಇಂಗ್ಲಿಸ್‌, ಸೀನ್‌ ಅಬೋಟ್‌, ಆ್ಯಡಂ ಝಂಪ ಮೊದಲಾದವರು ಕಾಣಿಸಿಕೊಂಡಿದ್ದಾರೆ. ನಾಯಕನಾಗಿರುವ ಮ್ಯಾಥ್ಯೂ ವೇಡ್‌ ಕೂಡ ಅಸಾಮಾನ್ಯ ಆಟಗಾರ. ಆಸೀಸ್​ ತಂಡ ಟಿ20 ವಿಶ್ವಕಪ್​ ಗೆಲ್ಲಲು ಇವರೇ ಕಾರಣ. ಭಾರತ ತಂಡದಲ್ಲಿರುವ ವಿಶ್ವಕಪ್‌ ಆಟಗಾರರ ಸಂಖ್ಯೆ ಕೇವಲ ಮೂರು. ಇದರಲ್ಲಿ ಯಶಸ್ಸು ಕಂಡವರು ಯಾರೂ ಇಲ್ಲ. ಹೀಗಾಗಿ ಇವರೆಲ್ಲ ಆಸೀಸ್​ ಸವಾಲು ಮೆಟ್ಟಿ ನಿಲ್ಲಬಲ್ಲರೇ ಎನ್ನುವುದು ಪಂದ್ಯದ ಕೌತುಕ.

ಏಷ್ಯನ್​ ಗೇಮ್ಸ್​ ಸ್ಫೂರ್ತಿಯಾಗಲಿ…

ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ಆಟಗಾರರೇ ಈ ಸರಣಿಯಲ್ಲೂ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಏಷ್ಯನ್​ ಗೇಮ್ಸ್ ಚಿನ್ನದ ಪದಕವನ್ನೇ ಸ್ಫೂರ್ತಿಯಾಗಿರಿಸಿಕೊಂಡು ಬಲಿಷ್ಠ ಮತ್ತು ಅನುಭವಿ ಆಸೀಸ್​ಗೆ ಸೋಲುಣಿಸಲಿ. ಈ ಮೂಲಕ ಹಿರಿಯರಿಂದ ಆಗದ ಸಾಧನೆಯನ್ನು ಯಂಗ್​ ಇಂಡಿಯಾ ಆಟಗಾರರು ಮಾಡುವಂತಾಗಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆ.

ಪಂದ್ಯದ ಪ್ರಸಾರ

ಇತ್ತಂಡಗಳ ಸರಣಿಯ ಎಲ್ಲ ಪಂದ್ಯಗಳು ಸ್ಪೋರ್ಟ್ಸ್ 18 ಮತ್ತು ಕಲರ್ಸ್ ಸಿನಿಪ್ಲೆಕ್ಸ್​ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಪಂದ್ಯದ ಲೈವ್ ಸ್ಟ್ರೀಮ್ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಎಲ್ಲ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭಗೊಳ್ಳುತ್ತದೆ.

Exit mobile version