ಅಹಮದಾಬಾದ್: ಆಸ್ಟ್ರೇಲಿಯಾ(IND VS AUS) ವಿರುದ್ಧ ಇಂದೋರ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಟೀಮ್ ಇಂಡಿಯಾ ಇದೀಗ ಸರಣಿಯ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಈಗಾಗಲೇ ಅಹಮದಾಬಾದ್ ತಲುಪಿರುವ ರೋಹಿತ್ ಪಡೆ ಈ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ಆರಂಭಿಸಿದೆ.
ಸೋಮವಾರ(ಮಾರ್ಚ್ 6) ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ತಂಡದ ಆಟಗಾರರು ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಂತೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಅಭ್ಯಾಸಕ್ಕೆ ಗೈರಾಗಿದ್ದು ವಿಶ್ರಾಂತಿ ಪಡೆದಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಅವರನ್ನು ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು ನೆಟ್ಸ್ನಲ್ಲಿ ಬೆವರು ಹರಿಸಿದ್ದಾರೆ. ಕೆ.ಎಲ್. ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಶುಭಮನ್ ಗಿಲ್ ಸಾಕಷ್ಟು ಅಭ್ಯಾಸ ನಡಸಿದರು. ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಗಿಲ್ ಜತೆ ಸುದೀರ್ಘವಾದ ಸೆಷನ್ ನಡೆಸಿದರು. ಇವರ ಜತೆಗೆ ಶ್ರೇಯಸ್ ಅಯ್ಯರ್ ಮತ್ತು ಕೆ.ಎಸ್. ಭರತ್ ಕೂಡ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಇದನ್ನೂ ಓದಿ IND VS AUS: ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ!
ಸ್ಪಿನ್ನರ್ಗಳಾದ ಆರ್.ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ ಅಭ್ಯಾಸಕ್ಕಿಂತ ಹೆಚ್ಚಾಗಿ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಪಡೆಯಲು ಗೆಲ್ಲಲೇ ಬೇಕಾದ ನಿಟ್ಟಿನಲ್ಲಿ ಭಾರತ ಈ ಪಂದ್ಯಕ್ಕೆ ಎಲ್ಲ ರೀತಿಯ ತಯಾರಿ ನಡೆಸುತ್ತಿದೆ.