ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೇ ಉಭಯ ತಂಡಗಳು ಪ್ರಕಟಗೊಂಡಿದೆ. ಫೆಬ್ರವರಿ 9ರಂದು ಮೊದಲ ಟೆಸ್ಟ್ ನಡೆಯಲಿದೆ. ಇದೀಗ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಈ ಸರಣಿ ಆಸೀಸ್ ತಂಡಕ್ಕೆ ಸವಾಲಿನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.
ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಜಸ್ಟಿನ್ ಲ್ಯಾಂಗರ್, ಆಸ್ಟ್ರೇಲಿಯಾಗೆ ಭಾರತ ಪ್ರವಾಸ ಅತ್ಯಂತ ಕಠಿಣವಾಗಿರಲಿದೆ ಎಂದು ಹೇಳಿದ್ದಾರೆ. ಭಾರತ ನೆಲದಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ಸಾಧನೆ ಉತ್ತಮವಾಗಿಲ್ಲ. ಆಸೀಸ್ 2004ರಲ್ಲಿ ಆಡ್ಯಂ ಗಿಲ್ಕ್ರಿಸ್ಟ್ ಅವರ ನಾಯಕತ್ವದಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಇದರ ಬಳಿಕ ಆಡಲಾದ ಯಾವುದೇ ಟೆಸ್ಟ್ ಸರಣಿಯನ್ನೂ ಭಾರತದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೂ ಮುನ್ನ 1969ರಲ್ಲಿ ಬಿಲ್ ಲಾರಿ ನೇತೃತ್ವದಲ್ಲಿ ಆಸಿಸ್ ಪಡೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು. ಆದ್ದರಿಂದ ಈ ಸರಣಿಯೂ ಆಸ್ಟ್ರೇಲಿಯಾಕ್ಕೆ ಕಠಿಣ ಎನ್ನಬಹುದು ಎಂದು ಲ್ಯಾಂಗರ್ ತಿಳಿಸಿದ್ದಾರೆ.
“ಭಾರತ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದು ಬಹಳ ಕಷ್ಟ. ಅದರಲ್ಲೂ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸುವುದು ಇನ್ನೂ ಕಷ್ಟ. ಬಹು ಕಾಲದಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲಾಗದ ಬಗ್ಗೆ ಬೇಸರ ಇರುವುದು ನಿಜ. ಆದರೆ ಈ ಬಾರಿಯೂ ಭಾರತವೇ ಗೆಲ್ಲುವ ಸಾಧ್ಯತೆ ಹೆಚ್ಚು” ಎಂದು ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಬಲಿಷ್ಠ
ಈ ಹಿಂದೆ ಭಾರತ ಕೇವಲ ತವರಿನಲ್ಲಿ ಮಾತ್ರ ಪ್ರಾಬಲ್ಯ ಸಾಧಿಸುತ್ತದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಭಾರತ ವಿದೇಶದಲ್ಲಿಯೂ ಹಲವು ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಬಲಿಷ್ಠವಾಗಿ ಗೋಚರಿಸಿದೆ. ಇದಕ್ಕೆ ಕಳೆದ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯೇ ಉತ್ತಮ ನಿದರ್ಶನ. ಆದ್ದರಿಂದ ಪ್ರಸ್ತುತ ಟೀಮ್ ಇಂಡಿಯಾವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಒಂದೊಮ್ಮೆ ಆಸ್ಟ್ರೇಲಿಯಾ ತಂಡ ಈ ಬಾರಿ ಭಾರತ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದರೆ ಇದು ಐತಿಹಾಸಿಕ ಗೆಲುವಾಗಲಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.
ಇದನ್ನೂ ಓದಿ | IND VS AUS | ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ