ಮುಂಬೈ: ಭಾರತದ ಟೆಸ್ಟ್ ತಂಡಕ್ಕೆ ಉಪನಾಯಕನ ಅಗತ್ಯವಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ(ravi shastri) ಹೇಳಿದ್ದಾರೆ. ಐಸಿಸಿ ಪಾಡ್ ಕಾಸ್ಟ್ಗೆ ನೀಡಿದ ಸಂದರ್ಶನದಲ್ಲಿ ಶಾಸ್ತ್ರಿ ಈ ವಿಚಾರವನ್ನು ಹೇಳಿದ್ದಾರೆ.
ಕೆ.ಎಲ್. ರಾಹುಲ್ ಅವರು ಉಪನಾಯಕ ಸ್ಥಾನವನ್ನು ಕಳೆದುಕೊಂಡಿರುವ ಕುರಿತು ರವಿ ಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ತವರಿನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡಕ್ಕೆ ಉಪನಾಯಕನ ಅಗತ್ಯವಿಲ್ಲ. ಒಂದೊಮ್ಮೆ ಪಂದ್ಯಕ್ಕೆ ನಾಯಕನ ಅನುಪಸ್ಥಿತಿ ಕಾಡಿದರೆ ತಂಡದಲ್ಲಿರುವ ಯಾವುದೇ ಅನುಭವಿ ಆಟಗಾರನಿಗೂ ಹಂಗಾಮಿ ನಾಯಕತ್ವದ ನೀಡಬಹುದು ಎಂದು ಅವರು ಹೇಳಿದರು.
ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಕೆ.ಎಲ್. ರಾಹುಲ್ ಅವರು ತಂಡದ ಉಪ ನಾಯಕರಾಗಿದ್ದರು. ಆದರೆ ಕಳಪೆ ಫಾರ್ಮ್ನ ಕಾರಣದಿಂದ ಅವರು ಈ ಹುದ್ದೆ ಕಳೆದುಕೊಂಡಿದ್ದಾರೆ. ಸದ್ಯ ಮೂರನೇ ಟೆಸ್ಟ್ ಪಂದ್ಯಕ್ಕೆ ಯಾರನ್ನೂ ಉಪನಾಯಕನಾಗಿ ನೇಮಿಸಿಲ್ಲ.
ಭಾರತ ಮತ್ತು ಆಸೀಸ್(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1ರಿಂದ ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ಇಂದೋರ್ ತಲುಪಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್ ತಂಡದ ನಾಯಕತ್ವ ವಹಿಸಲಿದ್ದಾರೆ.