ಸಿಡ್ನಿ: ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್(IND VS AUS) ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡದ ಆಟಗಾರರೆಲ್ಲರೂ ಭಾರತಕ್ಕೆ ಈಗಾಗಲೇ ಆಗಮಿಸಿದ್ದರೂ ಉಸ್ಮಾನ್ ಖವಾಜಾ(Usman Khawaja) ವೀಸಾ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾದಲ್ಲೇ ಉಳಿದಿದ್ದರು. ಆದರೆ ಇದೀಗ ಉಸ್ಮಾನ್ ಖವಾಜ ಅವರ ವೀಸಾ ಸಮಸ್ಯೆ ಬಗೆಹರಿದಿದ್ದು ಅವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಬುಧವಾರ ಆಸ್ಟ್ರೇಲಿಯಾ ಆಟಗಾರರು ಎರಡು ಗುಂಪುಗಳಾಗಿ ಭಾರತಕ್ಕೆ ಬಂದಿಳಿದ್ದಾರೆ. ಆದರೆ ಖವಾಜಾ ಮಾತ್ರ ವೀಸಾ ಸಮಸ್ಯೆಯಿಂದಾಗಿ ಸಿಡ್ನಿಯಲ್ಲೇ ಉಳಿದಿದ್ದರು. ಇದೀಗ ಎಲ್ಲ ಸಮಸ್ಯೆ ಬಗೆಹರಿದಿದ್ದು ಅವರಿಗೆ ಭಾರತಕ್ಕೆ ಬರಲು ಗ್ರೀನ್ ಸಿಗ್ನಲ್ ದೊರೆತಿದೆ.
ವಿಸಾ ಸಮಸ್ಯೆ ಬಗೆಹರಿದ ಕಾರಣ ಉಸ್ಮಾನ್ ಖವಾಜ ಫೆಬ್ರವರಿ 2ರಂದು ಭಾರತಕ್ಕೆ ಪ್ರಯಾಣ ಆರಂಭಿಸಲಿದ್ದು, ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಮೂಲಕ ಆಸಿಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ವೀಸಾ ದೊರೆತು ಭಾರತಕ್ಕೆ ಪ್ರಯಾಣಿಸುವ ಮುನ್ನ ಉಸ್ಮಾನ್ ಖವಾಜ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಭಾರತಕ್ಕೆ ನಾನು ಬರುತ್ತಿದ್ದೇನೆ” ಎಂದು ಬರೆದುಕೊಂಡು ವಿಮಾನದಲ್ಲಿ ಕುಳಿತಿರುವ ಫೋಟೊವನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಅಲಭ್ಯ
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಫೆ.9 ರಿಂದ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಆಟಗಾರರು ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ಪೂರ್ವಾಭ್ಯಾಸ ನಡೆಸಲಿದ್ದಾರೆ.