ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಕ್ಯಾಚ್ ಪಡೆದ 2ನೇ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದ್ವಿತೀಯ ವಿರಾಟ್ ಕೊಹ್ಲಿ ಅವರು ಆಸೀಸ್ ಸ್ಪಿನ್ನರ್ ನಥಾನ್ ಲಿಯೋನ್ ಅವರ ಕ್ಯಾಚ್ ಹಿಡಿಯುವ ಮೂಲಕ ಈ ಸಾಧನೆ ಮಾಡಿದರು. ಕೊಹ್ಲಿ ಸದ್ಯ 494 ಪಂದ್ಯಗಳ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಹಾಗೂ ವಿಶ್ವದ 7ನೇ ಕ್ರಿಕೆಟಿಗ ಎಂಬ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.
ಇದನ್ನೂ ಓದಿ IND VS AUS: ಶುಭಮನ್ ಗಿಲ್, ವಿರಾಟ್ ಕೊಹ್ಲಿ ಬೊಂಬಾಟ್ ಆಟ; 191 ರನ್ ಹಿನ್ನಡೆ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಿನಲ್ಲಿದೆ. ಜಯವರ್ಧನೆ 652 ಪಂದ್ಯಗಳಲ್ಲಿ 440 ಕ್ಯಾಚ್ಗಳನ್ನು ಹಿಡಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾ ಪರ ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅಗ್ರಸ್ಥಾನದಲ್ಲಿದ್ದಾರೆ. ದ್ರಾವಿಡ್ 509 ಪಂದ್ಯಗಳಲ್ಲಿ ಒಟ್ಟು 334 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಕ್ಕೂ ಅಧಿಕ ಕ್ಯಾಚ್ ಹಿಡಿದ ಪಟ್ಟಿಯಲ್ಲಿ ಅವರಿಗೆ 5ನೇ ಸ್ಥಾನ.