ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ಒಂದು ತೀರ್ಪು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂಪೈರ್ ಅವರ ಈ ನಿರ್ಧಾರಕ್ಕೆ ಟೀಮ್ ಇಂಡಿಯಾದ ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ 44 ರನ್ ಗಳಿಸಿದ್ದ ವೇಳೆ ಆಸೀಸ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆದ ಚೆಂಡು ಕೊಹ್ಲಿ ಕಾಲಿಗೆ ಬಡಿಯಿತು. ಇದೇ ವೇಳೆ ಆಸೀಸ್ ಆಟಗಾರು ಔಟ್ ಎಂದು ಕೂಗಿದರು. ಅಂಪೈರ್ ನಿತಿನ್ ಮೆನನ್ ಔಟ್ ಎಂದು ತೀರ್ಮಾನ ನೀಡಿದರು. ಕೂಡಲೇ ವಿರಾಟ್ ಕೊಹ್ಲಿ ರಿವ್ಯೂವ್ ಪಡೆದುಕೊಂಡರು. ಮೂರನೇ ಅಂಪೈರ್ ಟೀವಿ ರೀಪ್ಲೆಯಲ್ಲಿ ಪರೀಕ್ಷಿಸಿದರು. ಈ ವೇಳೆ ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡಕ್ಕೂ ಬಡಿದಿದೆ ಎಂದು ಅಲ್ಟ್ರಾಎಡ್ಜ್ ಸ್ಪಷ್ಟವಾಗಿ ತೋರಿಸಿದೆ.
ಆದರೆ ಚೆಂಡು ಮೊದಲು ಬ್ಯಾಟ್ಗೆ ತಾಗಿತ್ತೋ ಅಥವಾ ಪ್ಯಾಡ್ಗೆ ತಗುಲಿತೋ ಎಂಬುದು ಸ್ಪಷ್ಟವಾಗಿಲ್ಲ. ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲದಿದ್ದರೂ ಮೂರನೇ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ಅವರು ಆ ಚೆಂಡು ಮೊದಲು ಪ್ಯಾಡ್ಗೆ ಹೊಡೆಯುತ್ತಿರುವಂತೆ ತೋರಿತು ಎಂದು ಹೇಳಿ ಫಿಲ್ಡ್ ಅಂಫೈರ್ಗೆ ಔಟ್ ನೀಡಿವಂತೆ ಸೂಚಿಸಿದರು. ಇದರಂತೆ ನಿತಿನ್ ಮೆನನ್ ಎಲ್ಬಿಡಬ್ಲ್ಯು ಎಂದು ಔಟ್ ನೀಡಿದರು.
ಅಂಪೈರ್ ಅವರ ಈ ನಿರ್ಧಾರಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇಷ್ಟೊಂದು ತಾಂತ್ರಿಕತೆ ಇದ್ದರೂ ಈ ರೀತಿಯ ತಪ್ಪುಗಳು ಮರುಕಳಿಸುತ್ತಿರುವುದು ವಿಷಾದಕರ ಎಂದು ನಟ್ಟಿಗರು ಕಿಡಿಕಾರಿದ್ದಾರೆ.
ವಿರಾಟ್ ಕೊಹ್ಲಿಯೂ ಅಂಪೈರ್ ಅವರ ತೀರ್ಮಾನದಿಂದ ಆಕ್ರೋಶಗೊಂಡು ಡ್ರೆಸಿಂಗ್ ರೋಮ್ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಬಳಿ ಬಂದು ಇದೊಂದು ತಪ್ಪು ತೀರ್ಮಾನ ಎಂದು ಹೇಳಿದ್ದಾರೆ.