ಸಿಡ್ನಿ: ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನಾಡಲು(IND VS AUS) ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಆದರೆ ಎಡಗೈ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ(Usman Khawaja) ವೀಸಾ ಸಮಸ್ಯೆಯಿಂದ ಆಸ್ಟ್ರೇಲಿಯಾದಲ್ಲೇ ಉಳಿದಿದ್ದಾರೆ.
“ಉಸ್ಮಾನ್ ಖವಾಜಾ ಅವರಿಗೆ ವೀಸಾ ಸಮಸ್ಯೆಯಾಗಿದೆ. ಹೀಗಾಗಿ ಎರಡೂ ಬ್ಯಾಚ್ಗಳಲ್ಲಿ ಭಾರತಕ್ಕೆ ಅವರಿಗೆ ವಿಮಾನ ಏರಲು ಸಾಧ್ಯವಾಗಿಲ್ಲ. ಗುರುವಾರ ವೀಸಾ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಇದು ಸಾಧ್ಯವಾಗದಿದ್ದರೆ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ” ಎಂದು ಆಸೀಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸೋಮವಾರ ರಾತ್ರಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಉಸ್ಮಾನ್ ಖವಾಜಾ ಅತ್ಯುತ್ತಮ ಟೆಸ್ಟ್ ಆಟಗಾರನಿಗೆ ನೀಡಲಾಗುವ ಶೇನ್ ವಾರ್ನ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಬಳಿಕ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಆದರೆ ಖವಾಜಾ ವೀಸಾ ಸಮಸ್ಯೆಯಿಂದ ಪ್ರಯಾಣಿಸಲು ಸಾಧ್ಯವಾಗಿಲ್ಲ.
ವೀಸಾ ಸಮಸ್ಯೆಯಾದ ವಿಚಾರವನ್ನು ಖವಾಜಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಭಾರತ ಪ್ರವಾಸ ಕೈಗೊಳ್ಳಲು ವೀಸಾಕ್ಕಾಗಿ ಕಾಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9 ನಾಗ್ಪುರದಲ್ಲಿ ಆರಂಭಗೊಳ್ಳಲಿದೆ.