ಚೆನ್ನೈ: ಆಸ್ಟ್ರೇಲಿಯಾ(IND VS AUS) ವಿರುದ್ಧ ಬುಧವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 21 ರನ್ಗಳ ಸೋಲು ಕಂಡಿದೆ. ಆಸ್ಟ್ರೇಲಿಯಾ ಸರಣಿ ಗೆಲುವು ದಾಖಲಿಸಿ ಮರೆದಾಡಿದೆ. ಪಂದ್ಯದ ಸೋಲಿಗೆ ಸಾಮೂಹಿಕ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ನಾಯಕ ರೋಹಿತ್ ಶರ್ಮಾ(Rohit Sharma) ಹೇಳಿದ್ದಾರೆ.
ಚೆನ್ನೈಯ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭದ ಹೊರತಾಗಿಯೂ 49.1 ಓವರ್ಗಳಲ್ಲಿ 248 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಈ ಮೂಲಕ ಭಾರತ ಕಳೆದ ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಸೋಲಿಗೆ ತುತ್ತಾಯಿತು. ಕೊನೆಯ ಬಾರಿ ಭಾರತ ತಂಡ 2019ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಇದೀಗ ಆಸೀಸ್ ವಿರುದ್ದವೇ ಮತ್ತೆ ಸರಣಿ ಸೋಲು ಕಂಡಂತಾಗಿದೆ.
ಇದನ್ನೂ ಓದಿ IND VS AUS: ಹ್ಯಾಟ್ರಿಕ್ ಗೋಲ್ಡನ್ ಡಕ್ ಮೂಲಕ ಅನಗತ್ಯ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ “ಇದೊಂದು ದೊಡ್ಡ ಮೊತ್ತದ ಗುರಿಯಾಗಿರಲ್ಲಿಲ್ಲ. ನಮ್ಮ ತಂಡ ಉತ್ತಮ ಬ್ಯಾಟಿಂಗ್ ನಡೆಸುವಲ್ಲಿ ವಿಫಲವಾಗಿದೆ. ಪಂದ್ಯದ ಗೆಲುವಿಗೆ ಉತ್ತಮ ಜತೆಯಾಟ ಅತ್ಯಗತ್ಯ. ಆದರೆ ಈ ವಿಷಯದಲ್ಲಿ ನಾವು ಎಡವಿದ್ದೇವೆ. ಇದೊಂದು ಸಾಮೂಹಿಕ ವೈಫಲ್ಯ. ಈ ಸೋಲಿನಿಂದ ನಾವು ಸಾಕಷ್ಟು ಪಾಠ ಕಲಿತ್ತಿದ್ದೇವೆ” ಎಂದು ಹೇಳಿದರು.