ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 9 ರಿಂದ ಅಹಮದಾಬಾದ್ನಲ್ಲಿ ಆರಂಭವಾಗಲಿದೆ. ಆದರೆ ಈ ಮೊದಲು ನಡೆದ ಮೂರೂ ಟೆಸ್ಟ್ ಪಂದ್ಯಗಳು ಕೇವಲ ಎರಡುವರೆ ದಿನಕ್ಕೆ ಸೀಮಿತವಾದ ಕಾರಣ ಇದೀಗ ಅಹಮದಾಬಾದ್ ಟ್ರ್ಯಾಕ್ ಹೇಗೆ ವರ್ತಿಸಲಿದೆ ಎಂಬ ಕುತೂಹಲ ತೀವ್ರಗೊಂಡಿದೆ.
ಈ ಪಂದ್ಯ ನಡೆಯುವ ಮುನ್ನವೇ ಕೆಲ ಕ್ರಿಕೆಟ್ ಪಂಡಿತರು ಈ ಪಿಚ್ ಕೂಡ ಸ್ಪಿನ್ ಸ್ನೇಹಿ ಆಗಿರಲಿದೆ ಎಂದು ಹೇಳಿಕೆ ನೀಡಲು ಆರಂಭಿಸಿದ್ದಾರೆ. ಈ ಚರ್ಚೆಗಳ ಮಧ್ಯೆ ಬಿಸಿಸಿಐ ಕ್ಯುರೇಟರ್‌ಗಳಾದ ತಪೋಶ್ ಚಟರ್ಜಿ ಮತ್ತು ಆಶಿಷ್ ಭೌಮಿಕ್ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಇಲ್ಲಿನ ಪಿಚ್ ನಿರ್ದಿಷ್ಟವಾಗಿ ಹೀಗೆಯೇ ನಿರ್ಮಿಸಬೇಕು ಎಂದು ಯಾರಿಂದಲೂ ಸೂಚನೆ ಬಂದಿಲ್ಲ’ ಎಂದು ಹೇಳಿದ್ದಾರೆ.
ಅಹಮದಾಬಾದ್ ಸ್ಟೇಡಿಯಂ ನವೀಕರಣಗೊಳ್ಳುವ ಮೊದಲು ಇದು ದೇಶದ ಅತೀ ವೇಗದ ಏಕೈಕ ಟ್ರ್ಯಾಕ್ ಎಂದು ಹೆಸರುವಾಸಿಯಾಗಿತ್ತು. ಆದರೆ 2021ರಲ್ಲಿ ನವೀಕೃತಗೊಂಡ ಬಳಿಕ ಇಂಗ್ಲೆಂಡ್ ವಿರುದ್ಧ ಆಡಲಾದ ಟೆಸ್ಟ್ ಪಂದ್ಯ ಎರಡೇ ದಿನದಲ್ಲಿ ಮುಗಿದಿತ್ತು. ಇದೀಗ ಈ ಪಂದ್ಯವೂ ಇದೇ ರೀತಿ ಆಗಲಿದೆಯಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND VS AUS: ಅಂತಿಮ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಈಗಾಗಲೇ ಐಸಿಸಿ ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ ನೀಡಿದೆ. ಜತೆಗೆ ದೆಹಲಿ ಮತ್ತು ನಾಗ್ಪುರ ಪಿಚ್ಗೆ ಸಾಧಾರಣ ಮಟ್ಟದ ರೇಟಿಂಗ್ಸ್ ನೀಡಿದೆ. ಹೀಗಾಗಿ ಭಾರತ ಅಂತಿಮ ಟೆಸ್ಟ್ ಪಂದ್ಯವನ್ನು ಕನಿಷ್ಠ ನಾಲ್ಕು ದಿನಗಳ ವರೆಗೆ ಸಾಗಿಸುವ ನಿಟ್ಟಿನಲ್ಲಿ ಇಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ರಚಿಸುವ ಸಾಧ್ಯತೆ ಇದೆ.