ಪುಣೆ: ಬಾಂಗ್ಲಾದೇಶ(IND vs BAN) ವಿರುದ್ಧ ಗುರುವಾರ ನಡೆಯುವ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗದಲ್ಲಿ 2 ಬದಲಾವಣೆ ಮಾಡುವ ಸಾಧ್ಯತೆ ಇದೆ. ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಬದಲು ಮೊಹಮ್ಮದ್ ಶಮಿ ಹಾಗೂ ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಶಾರ್ದೂಲ್ ಠಾಕೂರ್ ಅವರು ಈ ಪಂದ್ಯದಿಂದ ಹೊರಗುಳಿಯುವುದು ಬಹುತೇಖ ಖಚಿತ. ಏಕೆಂದರೆ ಅವರು ಆಡಿದ 2 ಪಂದ್ಯಗಳಲ್ಲಿಯೂ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರಿಲ್ಲ. ಅವರಿಗೆ ಬ್ಯಾಟಿಂಗ್ ನಡೆಸುವ ಅವಕಾಶವೂ ಲಭಿಸಿಲ್ಲ. ಕೇವಲ ಒಂದೆರಡು ಓವರ್ಗೆ ಮಾತ್ರ ಸೀಮಿತರಾಗಿದ್ದಾರೆ. ಹೀಗಾಗಿ 10 ಓವರ್ ಎಸೆಯಬಲ್ಲ ಅನುಭವಿ ಶಮಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಶಮಿ ಅವರು ಹೊಸ ಚೆಂಡಿನಲ್ಲಿ ಘಾತಕ ಸ್ಫೆಲ್ ನಡೆಸಿ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಈ ಹಿಂದಿನ ಎರಡು ಪಂದ್ಯಗಳಿಂದ ಕೈ ಬಿಟ್ಟಿದ್ದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಅವಕಾಶ ಸಿಗುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ IND vs BAN: ಭಾರತ-ಬಾಂಗ್ಲಾ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
ಶ್ರೇಯಸ್ಗೆ ವಿಶ್ರಾಂತಿ?
ಬಾಂಗ್ಲಾ ತಂಡ ಅಷ್ಟಾಗಿ ಬಲಿಷ್ಠವಾಗಿರದ ಕಾರಣ ಈ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರನ್ನು ಆಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಸಿಸಿಐ ಮತ್ತು ತಂಡದ ಮ್ಯಾನೆಜ್ಮೆಂಟ್ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಶ್ರೇಯಸ್ ಅಯ್ಯರ್ ಕಳೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದರು.
ಪ್ರಯೋಗ ಸಲ್ಲದು
ಬಾಂಗ್ಲಾದೇಶ ಅಷ್ಟಾಗಿ ಬಲಿಷ್ಠವಾಗಿಲ್ಲ ಎಂದು ಪ್ರಯೋಗ ಮಾಡಲು ಮುಂದಾಗಬಾರದು. ಏಕೆಂದರೆ ಬಾಂಗ್ಲಾ ಕೂಡ ಭಾರತಕ್ಕೆ ಒಮ್ಮೆ ವಿಶ್ವಕಪ್ನಲ್ಲಿ ನೀರು ಕುಡಿಸಿದೆ. ಅದು ಕೂಡ ಮೊದಲ ಮುಖಾಮುಖಿಯಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.
ಭಾರತ ಮತ್ತು ಬಾಂಗ್ಲಾದೇಶ ವಿಶ್ವಕಪ್ನಲ್ಲಿ ಇದುವರೆಗೆ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಮೂರು ಪಂದ್ಯಗಲ್ಲು ಗೆದ್ದರೆ, ಬಾಂಗ್ಲಾ 1 ಪಂದ್ಯ ಗೆದ್ದಿದೆ. ಇತ್ತಂಡಗಳು ವಿಶ್ವಕಪ್ನಲ್ಲಿ ಮೊದಲು ಮುಖಾಮುಖಿಯಾಗಿದ್ದು 2007ರಲ್ಲಿ. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಸೋಲು ಕಂಡಿತ್ತು. ಆಗ ರಾಹುಲ್ ದ್ರಾವಿಡ್ ಅವರ ನಾಯಕತ್ವ ಭಾರತ ಆಡಿತ್ತು. ಇದಾದ ಬಳಿಕ ಭಾರತ ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಸಾರಸ್ಯವೆಂದರೆ ಈ ಬಾರಿ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಅಂದಿನ ಸೋಲಿಗೆ ಸೇಡು ತೀರಿಸುವ ಇರಾದೆಯಲ್ಲಿದ್ದಾರೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್/ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ಬಾಂಗ್ಲಾದೇಶ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.