Site icon Vistara News

IND VS BAN | ಬಾಂಗ್ಲಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಅವಕಾಶ!

ind vs ban test

ಚತ್ತೋಗ್ರಾಮ್​: ಬಾಂಗ್ಲಾದೇಶ(IND VS BAN ) ಪ್ರವಾಸದ ಏಕ ದಿನ ಸರಣಿಯಲ್ಲಿ ಸೋತು ನಿರಾಸೆ ಅನುಭವಿಸಿದ ಟೀಮ್​ ಇಂಡಿಯಾ ಇದೀಗ ಈ ಸೋಲಿನ ಸೇಡನ್ನು ಟೆಸ್ಟ್​ ಸರಣಿಯಲ್ಲಿ ತೀರಿಸಲು ಮುಂದಾಗಿದೆ. ಅದರಂತೆ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರ ಈ ಪಂದ್ಯ ಆರಂಭವಾಗಲಿದೆ.

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನ ಅಂಕ ಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಟೀಮ್​ ಇಂಡಿಯಾ ಫೈನಲ್​ ಪ್ರವೇಶಿಸಬೇಕಾದರೆ ಈ ಸರಣಿಯಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದೊಮ್ಮೆ ಈ ಸರಣಿಯಲ್ಲಿ ಭಾರತ ಸೋತರೆ ಅಥವಾ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತದ ಮುಂದಿನ ಹಾದಿ ಕಠಿಣವಾಗಲಿದೆ. ಈ ನಿಟ್ಟಿನಲ್ಲಿ ಭಾರತ ಈ ಸರಣಿಯಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ.

ರಾಹುಲ್-ಗಿಲ್​ ಆರಂಭಿಕ ಜೋಡಿ

ದ್ವಿತೀಯ ಏಕ ದಿನ ಪಂದ್ಯದ ವೇಳೆ ಹೆಬ್ಬರಳಿನ ಗಾಯಕ್ಕೆ ತುತ್ತಾದ ರೋಹಿತ್ ಶರ್ಮಾ ಹೆಚ್ಚಿನ ಚಿಕಿತ್ಸೆಗೆ ಸದ್ಯ ತವರಿಗೆ ಮರಳಿದ್ದಾರೆ. ಇವರ ಅಲಭ್ಯದ ಕಾರಣ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಜತೆ ಇನಿಂಗ್ಸ್ ಆರಂಭಿಸಲು ಸಿದ್ಧರಾಗಿದ್ದಾರೆ. ಗಿಲ್ ಈವರೆಗೆ ಭಾರತ ಪರ 11 ಟೆಸ್ಟ್​ ಪಂದ್ಯಗಳನ್ನಾಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟು ನಾಲ್ಕು ಅರ್ಧ ಶತಕ ಬಾರಿಸಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಯಯೂ ಶ್ರೇಷ್ಠ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.

ಜಯದೇವ್​ ಉನಾದ್ಕತ್​ಗೆ ಅವಕಾಶ?

ಬರೋಬ್ಬರಿ 12 ವರ್ಷಗಳ ನಂತರ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆದ ಸೌರಾಷ್ಟ್ರದ ನಾಯಕ ಜಯದೇವ್ ಉನಾದ್ಕತ್​ ಕೂಡ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಈ ಮೂಲಕ ತಮ್ಮ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ಅವರು ಎದುರು ನೋಡುತ್ತಿದ್ದಾರೆ. ಉನಾದ್ಕತ್ 2010ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅವರು ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಭಾರತ ಅಜೇಯ

ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ಅಜೇಯವಾಗಿದೆ. ಏಕೆಂದರೆ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಇದುವರೆಗೂ 11 ಪಂದ್ಯಗಳನ್ನು ಆಡಿದ್ದು 9 ಪಂದ್ಯಗಳಲ್ಲಿ ಜಯಿಸಿದೆ. 2 ಪಂದ್ಯ ಡ್ರಾಗೊಂಡಿದೆ. ಆದ್ದರಿಂದ ಈ ಸರಣಿಯಲ್ಲಿಯೂ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೂ ಬಾಂಗ್ಲಾ ಸವಾಲನ್ನು ಕಡೆಗಣಿಸುವಂತಿಲ್ಲ ಇದಕ್ಕೆ ಏಕ ದಿನ ಸರಣಿಯ ಫಲಿತಾಂಶವೇ ಉತ್ತಮ ನಿದರ್ಶನ. ಇಲ್ಲಿ ಭಾರತ 2-1 ಅಂತರದಿಂದ ಸೋಲು ಕಂಡಿತ್ತು.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಪಿಚ್​ ರಿಪೋರ್ಟ್​

Exit mobile version