ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಭ್ ಪಂತ್ ನೂತನ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4ಸಾವಿರ ಪ್ಲಸ್ ರನ್ ಬಾರಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಜತೆಗೆ ಸಿಕ್ಸರ್ ಗಳಿಕೆಯಲ್ಲೂ ದಾಖಲೆ ಬರೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಟ್ಟು 535 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿ 44.74ರ ಬ್ಯಾಟಿಂಗ್ ಸರಾಸರಿಯಲ್ಲಿ 15 ಶತಕ ಹಾಗೂ 108 ಅರ್ಧಶತಕ ಸಹಿತ 17,092 ರನ್ ಬಾರಿಸಿದ್ದಾರೆ. ಇದೀಗ ಭಾರತ ಪರ 128ನೇ ಪಂದ್ಯವನ್ನಾಡಿದ ರಿಷಭ್ ಪಂತ್ 33.78ರ ಬ್ಯಾಟಿಂಗ್ ಸರಾಸರಿಯಲ್ಲಿ 4,021 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 15 ಅರ್ಧಶತಕಗಳು ಸೇರಿವೆ. ಬಾಂಗ್ಗಾ ವಿರುದ್ಧದ ಪಂದ್ಯದಲ್ಲಿ ಪಂತ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಸಿಕ್ಸರ್‌ನಲ್ಲಿ ನೂತನ ದಾಖಲೆ
ರಿಷಭ್ ಪಂತ್ ಈ ಪಂದ್ಯದಲ್ಲಿ ರನ್ ದಾಖಲೆ ಜತೆಗೆ ಕೇವಲ 54 ಟೆಸ್ಟ್ ಇನಿಂಗ್ಸ್‌ಗಳನ್ನಾಡಿ 50 ಸಿಕ್ಸರ್ ಸಿಡಿಸುವ ಮೂಲಕ ಅತಿ ಕಡಿಮೆ ಇನಿಂಗ್ಸ್‌ಗಳನ್ನಾಡಿ ವೇಗಿವಾಗಿ 50 ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟರ್ ಎನ್ನುವ ಸಾಧನೆಯನ್ನೂ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಂತ್ ಇದೀಗ 4ನೇ ಸ್ಥಾನಕ್ಕೇರಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್(100), ಎಂ. ಎಸ್. ಧೋನಿ(78), ಬ್ರಾಡ್ ಹಡ್ಡೀನ್(54) ಮೊದಲ 3 ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅವಕಾಶ!