Site icon Vistara News

IND VS BAN | ಬಾಂಗ್ಲಾ ವಿರುದ್ಧ ಐದು ವಿಕೆಟ್​ ಕಿತ್ತು ಅಶ್ವಿನ್​, ಕುಂಬ್ಳೆ ದಾಖಲೆ ಮುರಿದ ಕುಲ್​ದೀಪ್​ ಯಾದವ್​

kuldeep yadav

ಚತ್ತೋಗ್ರಾಮ್​: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್​ ಕಿತ್ತು ಭರ್ಜರಿ ಪ್ರದರ್ಶನ ತೋರಿದ ಕುಲ್​ದೀಪ್​ ಯಾದವ್‌ ವಿಶೇಷ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಕುಲ್​ದೀಪ್​ ಅವರ ಸ್ಪಿನ್​ ಮೋಡಿಗೆ ಸಿಲುಕಿ ಬಾಂಗ್ಲಾದೇಶ ಮೊದಲ ಇನಿಂಗ್ಸ್​ನಲ್ಲಿ 150 ರನ್​ಗೆ ಆಲೌಟ್​ ಆಯಿತು. ಈ ಇನಿಂಗ್ಸ್​ನಲ್ಲಿ ಕುಲ್​ದೀಪ್​ ಯಾದವ್ 40ಕ್ಕೆ 5 ವಿಕೆಟ್​ ಕೀಳುವ ಮೂಲಕ ಬಾಂಗ್ಲಾದೇಶ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಮೊದಲ ಭಾರತೀಯ ಸ್ಪಿನ್ನರ್‌ ಎನಿಸಿಕೊಂಡರು. ಆ ಮೂಲಕ ಆರ್‌. ಅಶ್ವಿನ್‌ ಮತ್ತು ಅನಿಲ್‌ ಕುಂಬ್ಳೆ ಅವರ ದಾಖಲೆಯನ್ನು ಮುರಿದರು.

2015ರಲ್ಲಿ ಆರ್‌. ಅಶ್ವಿನ್ ಅವರು ಬಾಂಗ್ಲಾದೇಶ ವಿರುದ್ಧ ಅವರದೇ ನೆಲದಲ್ಲಿ 87 ರನ್‌ ಕೊಟ್ಟು 5 ವಿಕೆಟ್‌ ಕಿತ್ತಿದ್ದರು. ಇದಕ್ಕೂ ಮುನ್ನ 2004ರಲ್ಲಿ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಬಾಂಗ್ಲಾದೇಶ ವಿರುದ್ಧ 55 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದರು. ಇದೀಗ ಕಡಿಮೆ ರನ್​ ಅಂತರದಲ್ಲಿ 5 ವಿಕೆಟ್‌ ಪಡೆಯುವ ಮೂಲಕ ಕುಲ್​ದೀಪ್​​ ಈ ಇಬ್ಬರು ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.

ಇದು ಕುಲ್​ದೀಪ್​ ಯಾದವ್ ಅವರ ಮೂರನೇ 5 ವಿಕೆಟ್‌ ಸಾಧನೆಯಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್‌ ವಿರುದ್ದದ ಅವರು 5 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. 2007ರಲ್ಲಿ ಮೀರ್‌ಪುರ್‌ನಲ್ಲಿ ನಡೆದ ಟೆಸ್ಟ್​ನಲ್ಲಿ ಮಾಜಿ ಎಡಗೈ ವೇಗಿ ಜಹೀರ್‌ ಖಾನ್‌ 87 ರನ್‌ಗಳಿಗೆ 7 ವಿಕೆಟ್‌ ಕಬಳಿಸಿದ್ದು ಇದುವರೆಗಿನ ಭಾರತೀಯ ಬೌಲರ್​ನ ಉತ್ತಮ ದಾಖಲೆಯಾಗಿದೆ.

ಇದನ್ನೂ ಓದಿ | IND VS BAN | ಗಾಯದಿಂದ ಚೇತರಿಕೆ; ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್​ಗೆ​ ರೋಹಿತ್​ ಲಭ್ಯ!

Exit mobile version