Site icon Vistara News

IND VS BAN | ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್​ ಅರ್ಧಶತಕ; ಬೃಹತ್​ ಮೊತ್ತದತ್ತ ಟೀಮ್​ ಇಂಡಿಯಾ

Cheteshwar Pujara

ಚೇತೇಶ್ವರ್​ ಪೂಜಾರ

ಚತ್ತೋಗ್ರಾಮ್​: ಕೆಲ ವರ್ಷಗಳ ಬಳಿಕ ಮಿಂಚಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(90) ಬ್ಯಾಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ಅವರ ಸಮಯೋಚಿತ ಅರ್ಧಶತಕ(82*)ದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ (IND VS BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿದೆ. ಈ ಮೂಲಕ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದೆ.

ಬುಧವಾರ ಝಹೂರ್ ಅಹಮದ್ ಚೌಧರಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಮ್​ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್‌ (20) ಮತ್ತು ಹಂಗಾಮಿ ನಾಯಕ ಕೆ.ಎಲ್. ರಾಹುಲ್(22) ಬೇಗನೆ ವಿಕೆಟ್‌ ಒಪ್ಪಿಸಿ ತಂಡಕ್ಕೆ ಆಘಾತ ನೀಡಿದರು. ಇದರ ಬೆನ್ನಲ್ಲೇ ವಿರಾಟ್​ ಕೊಹ್ಲಿಯೂ ಕೇವಲ ಒಂದು ರನ್​ ಗಳಿಸಿ ನಿರಾಶೆ ಮೂಡಿಸಿದರು. ತಂಡದ ಮೊತ್ತ 48 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೂರು ವಿಕೆಟ್​ ಕಳೆದುಕೊಂಡು ಪರದಾಡುತ್ತಿದ್ದ ತಂಡಕ್ಕೆ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ ಮತ್ತು ರಿಷಭ್​ ಪಂತ್​ ಆಸರೆಯಾದರು. ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ 64 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ರಿಷಭ್‌ ಪಂತ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಪೂಜಾರ-ಅಯ್ಯರ್​ ಸಮಯೋಚಿತ ಬ್ಯಾಟಿಂಗ್​

ಪಂತ್​ ವಿಕೆಟ್​ ಬಳಿಕ ಜತೆಯಾದ ಶ್ರೇಯಸ್​ ಅಯ್ಯರ್​ ಅವರು ಪೂಜಾರ ಜತೆ ಸೇರಿ ಉತ್ತಮ ಜತೆಯಾಟ ನಡೆಸಿದರು. ಈ ಜೋಡಿ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಐದನೇ ವಿಕೆಟ್‌ಗೆ ಈ ಜೋಡಿ 317 ಎಸೆತಗಳನ್ನು ಎದುರಿಸಿ 149 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ ಕೇವಲ 10 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಪೂಜಾರ 203 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 90 ರನ್ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಪೂಜಾರ ಕಳೆದ ಕೆಲವು ವರ್ಷಗಳ ಬಳಿಕ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದರು.

ಸದ್ಯ ಶ್ರೇಯಸ್ ಅಯ್ಯರ್ 169 ಎಸೆತಗಳನ್ನು ಎದುರಿಸಿ 82 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪೂಜಾರ ಬಳಿಕ ಆಡಲಿಳಿದ ಅಕ್ಷರ್ ಪಟೇಲ್ 14 ರನ್‌ ಗಳಿಸಿ ದಿನದಾಟದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಬಾಂಗ್ಲಾ ಪರ ಮಾರಕ ಬೌಲಿಂಗ್​ ನಡೆಸಿದ ಸ್ಪಿನ್ನರ್​ ತೈಜುಲ್​ ಇಸ್ಲಾಂ 84ಕ್ಕೆ 3 ವಿಕೆಟ್​ ಕಿತ್ತು ಟೀಮ್​ ಇಂಡಿಯಾ ಬ್ಯಾಟರ್​ಗಳನ್ನು ಕಾಡಿದರು. ಉಳಿದಂತೆ ಮೆಹದಿ ಹಸನ್​ 71ಕ್ಕೆ 2 ವಿಕೆಟ್​ ಉರುಳಿಸಿದರು.

ಇದನ್ನೂ ಓದಿ | IND VS BAN | 4 ಸಾವಿರ ರನ್​ ಜತೆಗೆ ಸಿಕ್ಸರ್​ನಲ್ಲಿಯೂ ನೂತನ ದಾಖಲೆ ಬರೆದ ರಿಷಭ್​ ಪಂತ್​

Exit mobile version