Site icon Vistara News

IND VS BAN| ತಂಡಕ್ಕೆ ಅಚ್ಚರಿಯ ಕರೆ ಬಂದರೂ ವೀಸಾ ಸಮಸ್ಯೆಯಿಂದ ಮೊದಲ ಟೆಸ್ಟ್​ಗೆ ಅಲಭ್ಯರಾದ ಉನಾದ್ಕತ್​

jaydev unadkat

ನವದೆಹಲಿ: ಸೌರಾಷ್ಟ್ರದ ವೇಗಿ ಜಯದೇವ್ ಉನಾದ್ಕತ್​ಗೆ​ ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾದ ಬಾಗಿಲು ತೆರೆದರೂ ಅವರ ಪಾಲಿಗೆ ದುರದೃಷ್ಟ ಮತ್ತೊಮ್ಮೆ ಬೆಂಬಿಡದೆ ಕಾಡಿದೆ. ಕೊನೆಯ ಕ್ಷಣದಲ್ಲಿ ವೀಸಾ ಸಮಸ್ಯೆಯಾಗಿರುವ ಕಾರಣ ಬಾಂಗ್ಲಾದೇಶಕ್ಕೆ(IND VS BAN) ಪ್ರವಾಸ ಕೈಗೊಳ್ಳಲು ಸಾಧ್ಯವಾಗದೆ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.

12 ವರ್ಷಗಳ ಬಳಿಕ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆದ ಅವರು ಈ ಪಂದ್ಯದ ಮೂಲಕ ಕಮ್​ಬ್ಯಾಕ್​ ಮಾಡಲು ಎದುರು ನೋಡುತ್ತಿದ್ದರು. ಆದರೆ ವೀಸಾ ಸಮಸ್ಯೆಯಿಂದ ಅವರ ಕನಸಿಗೆ ಹಿನ್ನಡೆಯಾಗಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ಸತತವಾಗಿ ಅದ್ಬುತ ಪ್ರದರ್ಶನ ನೀಡುತ್ತಿರುವ ಉನಾದ್ಕತ್​ಗೆ ಈ ಸರಣಿಯಲ್ಲಿ ಬಿಸಿಸಿಐನಿಂದ ಕರೆ ಬಂದಿರುವುದು ಅಚ್ಚರಿ ಮೂಡಿಸಿತ್ತು. ಆದರೆ ಬಿಸಿಸಿಐನ ಲಾಜಿಸ್ಟಿಕ್ ಡಿಪಾರ್ಟ್‌ಮೆಂಟ್ ವೀಸಾ ವ್ಯವಸ್ಥೆಯನ್ನು ನಿಗದಿತ ಸಮಯದಲ್ಲಿ ವ್ಯವಸ್ಥೆ ಮಾಡುವಲ್ಲಿ ವಿಫಲವಾದ ಕಾರಣ ಉನಾದ್ಕತ್​ಗೆ ನಿರಾಸೆಯಾಗಿದೆ.

ಮಂಗಳವಾರದವರೆಗೂ ಜಯ್‌ದೇವ್ ಉನಾದ್ಕತ್​ ರಾಜ್‌ಕೋಟ್‌ನ ತಮ್ಮ ಮನೆಯಲ್ಲಿಯೇ ಇದ್ದು ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡನೇ ಪಂದ್ಯಕ್ಕೆ ಅವರು ಲಭ್ಯವಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಭರವಸೆ ನೀಡಿದೆ. ಉನಾದ್ಕತ್​ ತಮ್ಮ ಏಕೈಕ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು 2010ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಂಚೂರಿಯನ್‌ನಲ್ಲಿ ಆಡಿದ್ದರು. ಅದಾದ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಟ್ಟಿಗೊಳಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ | IND VS BAN | ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್​ ಅರ್ಧಶತಕ; ಬೃಹತ್​ ಮೊತ್ತದತ್ತ ಟೀಮ್​ ಇಂಡಿಯಾ

Exit mobile version