ಢಾಕಾ: ಬಾಂಗ್ಲಾದೇಶ(IND VS BAN) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಆಘಾತವೊಂದು ಎದುರಾಗಿದೆ. ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದು ದ್ವಿತೀಯ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ.
ಕೆ.ಎಲ್. ರಾಹುಲ್ ಬುಧವಾರ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ವೇಳೆ ಕೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ರಾಹುಲ್ ಗಾಯಗೊಂಡಿರುವುದು ಇದೀಗ ತಂಡದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಗಾಯ ಗಂಭೀರವಾಗಿಲ್ಲ ಎಂದು ಹೇಳಲಾಗಿದ್ದು, ವೈದ್ಯರು ರಾಹುಲ್ ಅವರನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
“ಕೆಎಲ್ ರಾಹುಲ್ ಗಾಯ ಗಂಭೀರವಾದುದಲ್ಲ, ಬ್ಯಾಟಿಂಗ್ ವೇಳೆ ಸಣ್ಣ ಗಾಯವಾಗಿದೆ. ಅವರು ಸುರಕ್ಷಿತವಾಗಿದ್ದಾರೆ. ಗುರುವಾರದ ಪಂದ್ಯದಲ್ಲಿ ಆಡುವ ಭರವಸೆ ಇದೆ” ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಭರವಸೆ ನೀಡಿದ್ದಾರೆ.
ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಎಸೆತ ಒಂದು ಎಸೆತ ರಾಹುಲ್ ಕೈಗೆ ತಗುಲಿದೆ. ಈ ವೇಳೆ ರಾಹುಲ್ ನೋವಿನಿಂದ ನರಳಿದರು. ತಕ್ಷಣ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ರಾಹುಲ್ ಅಭ್ಯಾಸವನ್ನು ಮೊಟಕುಗೊಳಿಸಿದರು.
ಈಗಾಗಲೇ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ನವದೀಪ್ ಸೈನಿ ಸೇರಿದಂತೆ ಹಲವು ಆಟಗಾರರು ಗಾಯಗೊಂಡು ಈ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್ ಅವರಿಗೂ ಗಾಯವಾಗಿರುವುದು ಟೀಮ್ ಇಂಡಿಯಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೊಮ್ಮೆ ರಾಹುಲ್ ಅನುಪಸ್ಥಿತಿ ಎದುರಾದರೆ ಆಗ ಉಪನಾಯಕ ಚೇತೇಶ್ವರ್ ಪೂಜಾರ ತಂಡದ ನಾಯಕತ್ವ ವಹಿಸಲಿದ್ದಾರೆ.
ಇದನ್ನೂ ಓದಿ | INDvsBAN | ಎರಡನೇ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ; ಶಕಿಬ್ ಅಲಭ್ಯ, ಯುವ ಆಟಗಾರನ ಸೇರ್ಪಡೆ