ಚತ್ತೋಗ್ರಾಮ್: ಭಾರತ ಮತ್ತು ಬಾಂಗ್ಲಾದೇಶ (IND VS BAN) ನಡುವೆ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಶನಿವಾರ ನಡೆಯಲಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ವಶಪಡಿಸಿಕೊಂಡಿರುವ ಬಾಂಗ್ಲಾದೇಶ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಆಡುವ ಬಳಗದ ಮಾಹಿತಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕ ದಿನ ಪಂದ್ಯ ನಡೆಯುವ ಚತ್ತೋಗ್ರಾಮ್‌ನ ಝಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಢಾಕಾದ ಶೇರ್ ಎ ಬಾಂಗ್ಲಾ ಪಿಚ್ಗಿಂತ ಇಲ್ಲಿ ಉತ್ತಮ ಬ್ಯಾಟಿಂಗ್ ನಡೆಸಬಹುದು. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡುವ ತಂಡ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬಹುದು.
ಟೀಮ್ ಇಂಡಿಯಾದ ಓಪನಿಂಗ್ ಯಾರು?
ಮೂರನೇ ಏಕ ದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿರುವುದರಿಂದ ತಂಡದ ಇನಿಂಗ್ಸ್ ಯಾರು ಆರಂಭಿಸಲಿದ್ದಾರೆ ಎಂಬ ದೊಡ್ಡ ಚಿಂತೆ ಟೀಮ್ ಇಂಡಿಯಾಕ್ಕೆ ಕಾಡಲಾಂಭಿಸಿದೆ. ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಜತೆ ವಿರಾಟ್ ಕೊಹ್ಲಿ ಭಾರತದ ಇನಿಂಗ್ಸ್ ಆರಂಭಿಸಿದ್ದರು. ಆದರೆ ಕೊಹ್ಲಿ ಇಲ್ಲಿ ಯಶಸ್ಸು ಕಂಡಿರಲಿಲ್ಲ. ಇದೀಗ ರೋಹಿತ್ ಬದಲಿಗೆ ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಅಥವಾ ರಜತ್ ಪಾಟಿದಾರ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಒಂದೊಮ್ಮೆ ರಜತ್ ಪಾಟಿದಾರ್ ಬದಲು ರಾಹುಲ್ ತ್ರಿಪಾಠಿ ಆಡುವ ಬಳಗದಲ್ಲಿ ಅವಕಾಶ ಪಡೆದರೆ ಆಗ ಅವರು ಶಿಖರ್ ಜತೆ ಕಣಕ್ಕಿಳಿಯಬಹುದು.
ಭಾರತ ಸಂಭಾವ್ಯ ತಂಡ
ಕೆ.ಎಲ್. ರಾಹುಲ್ (ನಾಯಕ), ರಾಹುಲ್ ತ್ರಿಪಾಠಿ / ರಜತ್ ಪಾಟಿದಾರ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್.
ಇದನ್ನೂ ಓದಿ | IND VS BAN | ವೈಟ್‌ವಾಶ್ ಭೀತಿಯಿಂದ ಪಾರಾದೀತೇ ಟೀಮ್ ಇಂಡಿಯಾ; ಕೊನೇ ಪಂದ್ಯಕ್ಕೆ ಸಜ್ಜಾಗುತ್ತಿದೆ ರಾಹುಲ್ ಪಡೆ