ಚತ್ತೋಗ್ರಾಮ್: ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಅವರ ಸ್ಪಿನ್ ಮೋಡಿಗೆ ನಲುಗಿದ ಬಾಂಗ್ಲಾದೇಶ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಭಾರತ ತಂಡ ಆರಂಭಿಕ ಇನಿಂಗ್ಸ್‌ನಲ್ಲಿ 254 ರನ್ ಮುನ್ನಡೆ ಪಡೆದುಕೊಂಡಿದೆ.
ಎರಡನೇ ದಿನದಾಟದಲ್ಲಿ ಪ್ರಮುಖ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ್ದ ಬಾಂಗ್ಲಾದೇಶ ಮೂರನೇ ದಿನದಾಟದ ಮೊದಲ ಸೆಷನ್ನಲ್ಲಿಯೇ ಇನ್ನುಳಿದ ಎರಡು ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ತಂಡಕ್ಕೆ ಕೇವಲ 17 ರನ್ಗಳ ಕೊಡುಗೆ ನೀಡಿದ ಬಾಂಗ್ಲಾ ಬಾಲಂಗೋಚಿಗಳು ತಂಡದ ಮೊತ್ತವನ್ನು 150 ರನ್‌ಗಳಿಗೆ ಕೊಂಡೊಯ್ದರು. ಎರಡನೇ ದಿನದಾಟದಲ್ಲಿ ಬಾಂಗ್ಲಾ ಬ್ಯಾಟಿಂಗ್ ವಿಭಾಗವನ್ನು ಪುಡಿಗಟ್ಟಿ 4 ವಿಕೆಟ್ ಉರುಳಿಸಿದ್ದ ಕುಲ್ದೀಪ್ ಮೂರನೇ ದಿನದಾಟದ ಆರಂಭದಲ್ಲೇ ಖಲೀದ್ ವಿಕೆಟ್ ಪಡೆದು 5 ವಿಕೆಟ್ ಪಡೆದ ಸಾಧನೆ ಮಾಡಿದರು.
ಅಂತಿಮವಾಗಿ ಮೆಹದಿ ಹಸನ್ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಬಾಂಗ್ಲಾ ಇನಿಂಗ್ಸ್ಗೆ ಅಂತ್ಯ ಹಾಡಿದರು. ಸದ್ಯ 254 ರನ್ಗಳ ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ, ಬಾಂಗ್ಲಾಕ್ಕೆ ಫಾಲೋ ಆನ್ ಹೆರದೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ರಾಹುಲ್ ಹಾಗೂ ಗಿಲ್ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಸದ್ಯ ಭಾರತ ವಿಕೆಟ್ ನಷ್ಟವಿಲ್ಲದೆ 20 ರನ್ ಗಳಿಸಿ ಆಟ ಮುಂದುವರಿಸಿದೆ.
ಇದನ್ನೂ ಓದಿ | IND VS BAN | ಮೆಹದಿ ಹಸನ್ ಎಸೆತದಲ್ಲಿ 100 ಮೀಟರ್ ದೂರ ಸಿಕ್ಸರ್ ಸಿಡಿಸಿದ ಉಮೇಶ್ ಯಾದವ್!