ಚತ್ತೋಗ್ರಾಮ್: ಏಕದಿನ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ(IND VS BAN) ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಅಲಾನ್ ಡೊನಾಲ್ಡ್ ಅವರು 25 ವರ್ಷಗಳ ಹಳೆಯ ಘಟನೆ ಬಗ್ಗೆ ಇದೀಗ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ಕ್ಷಮೆಯಾಚಿಸಿದ್ದಾರೆ.
ಝಹೂರ್ ಅಹ್ಮದ್ ಚೌಧುರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಮುನ್ನ ಮಾತನಾಡಿದ ಅಲಾನ್ ಡೊನಾಲ್ಡ್, 1997ರಲ್ಲಿ ಡರ್ಬನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕ ದಿನ ಪಂದ್ಯದ ವೇಳೆ ಮಿತಿ ಮೀರಿ ರಾಹುಲ್ ದ್ರಾವಿಡ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಜತೆಗೆ ಈ ಘಟನೆಯಿಂದಾಗಿ ನಾನು ಇದೀಗ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
“ಅಂದು ಡರ್ಬನ್‌ನಲ್ಲಿ ನಡೆದ ಘಟನೆಯನ್ನು ಇಂದು ನೆನೆಸಿದರೆ ನಾಚಿಕೆಯಾಗುತ್ತದೆ. ಇದನ್ನು ಸಂಪೂರ್ಣವಾಗಿ ವಿವರಿಸಲು ನಾನು ಹೋಗುವುದಿಲ್ಲ. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ನಮ್ಮನ್ನು ತುಂಬಾ ಕಾಡಿದ್ದರು. ನಮ್ಮ ತಂಡದ ಬೌಲರ್ಗಳು ಯಾವ ರೀತಿಯಲ್ಲಿ ಬೌಲಿಂಗ್ ಮಾಡಿದರು ಉಭಯ ಆಟಗಾರರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ ಈ ವೇಳೆ ನಾನು ಸ್ವಲ್ಪ ಮಿತಿ ಮೀರಿ ವರ್ತಿಸಿದ್ದೆ” ಎಂದು ಡೊನಾಲ್ಡ್ ತಿಳಿಸಿದರು.
“ಈ ಘಟನೆ ಬಗ್ಗೆ ರಾಹುಲ್ ದ್ರಾವಿಡ್ ಜತೆ ಕುಳಿತುಕೊಂಡು ಅವರ ಬಳಿ ಕ್ಷಮೆಯಾಚಿಸಬೇಕು. ಜತೆಗೆ ಅವರೊಂದಿಗೆ ಒಂದು ದಿನ ಭೋಜನ ಸವಿಯಲು ಇಷ್ಟಪಡುತ್ತೇನೆ. ಈ ಮೂಲಕ ಅಂದು(1997ರಲ್ಲಿ) ದ್ರಾವಿಡ್ ಅವರನ್ನು ಸ್ಲೆಡ್ಜ್ ಮಾಡಿದಕ್ಕೆ ಕ್ಷಮೆಯಾಚಿಸಬೇಕು. ಈ ಘಟನೆಯ ಹೊರತಾಗಿಯೂ ದ್ರಾವಿಡ್ ಎಂದರೆ ನನಗೆ ಬಹಳಾ ಗೌರವವಿದೆ ” ಎಂದು ಡೊನಾಲ್ಡ್ ನಗುತ್ತಾ ಹೇಳಿದರು.
ಇದನ್ನೂ ಓದಿ | INDW VS AUSW | ವನಿತಾ ಟಿ20 ; ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಸರಣಿಯಲ್ಲಿ 2-1 ಹಿನ್ನಡೆ