ಮುಂಬಯಿ: ಬಾಂಗ್ಲಾದೇಶ(IND VS BAN) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ ಶಭಮನ್ ಗಿಲ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರ ಎಂದು ಭವಿಷ್ಯ ನುಡಿದಿದ್ದಾರೆ.
ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡಿದ ವಾಸಿಂ ಜಾಫರ್, ಶುಭಮನ್ ಗಿಲ್ ಅನೇಕ ಸಂದರ್ಭಗಳಲ್ಲಿ ಶತಕದ ಅಂಚಿನವರೆಗೆ ಬಂದರೂ ಶತಕ ಸಿಡಿಸುವಲ್ಲಿ ಎಡವಿದ್ದರು. ಇದೀಗ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದ ಸಂತಸದಲ್ಲಿದ್ದಾರೆ. ಕ್ಲಾಸ್ ಆಟಗಾರನಾಗಿರುವ ಅವರು ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಯ ಸ್ಥಾನ ತುಂಬಲಿದ್ದಾರೆ ಎಂದು ಜಾಫರ್ ಹೇಳಿದ್ದಾರೆ.
“ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಬಳಿಕ ಇನಿಂಗ್ಸ್ ಕಟ್ಟಬಲ್ಲ ಆಟಗಾರನೆಂದರೆ ಅದು ಶುಭಮನ್ ಗಿಲ್. ಟಿ20 ಕ್ರಿಕೆಟ್ ಯುಗದಲ್ಲಿ ಎಲ್ಲ ತಂಡದಲ್ಲಿಯೂ ನಿಂತು ಆಡುವ ಆಟಗಾರರ ಸಮಸ್ಯೆ ಎದ್ದು ಕಾಣುತ್ತಿದೆ. ಆದರೆ ಗಿಲ್ ಅವರಲ್ಲಿ ತಾಳ್ಮೆ ಮತ್ತು ಇನಿಂಗ್ಸ್ ಬೆಳೆಸುವ ಕೌಶಲ್ಯವಿದೆ. ಹೀಗಾಗಿ ಗಿಲ್ ಅವರಂತಹ ಅಮೂಲ್ಯ ಆಟಗಾರನನ್ನು ಭಾರತ ತಂಡ ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಗಿಲ್ ಬಾಂಗ್ಲಾ ವಿರುದ್ಧ ದ್ವಿತೀಯ ಇನಿಂಗ್ಸ್ನಲ್ಲಿ 152 ಎಸೆತ ಎದುರಿಸಿ 110 ರನ್ ಗಳಿಸಿದ್ದರು.
ಸದ್ಯ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಉತ್ತಮ ಸ್ಥಿತಿಯಲ್ಲಿದೆ. ಬಾಂಗ್ಲಾದೇಶ ನಾಲ್ಕನೇ ದಿನ ಅಂತ್ಯಕ್ಕೆ 102 ಒವರ್ಗಳಲ್ಲಿ 6 ವಿಕೆಟ್ ನಷ್ಟ ಮಾಡಿಕೊಂಡು 272 ರನ್ ಪೇರಿಸಿ 241 ರನ್ಗಳ ಹಿನ್ನಡೆಯಲ್ಲಿದೆ. ಅಂತಿಮ ದಿನ ನಾಲ್ಕು ವಿಕೆಟ್ಗಳನ್ನು ಕಬಳಿಸಿದರೆ ಭಾರತ ತಂಡದ ಕೈ ಮೇಲಾಗಲಿದೆ.
ಇದನ್ನೂ ಓದಿ | INDvsBAN | ಸುಲಭ ಕ್ಯಾಚ್ ಬಿಟ್ಟು, ಕಷ್ಟದ ಸ್ಟಂಪ್ ಮಾಡಿದ ರಿಷಭ್ ಪಂತ್!