ಪುಣೆ: ಹ್ಯಾಟ್ರಿಕ್ ಗೆಲುವು ಕಂಡಿರುವ ಭಾರತ(India vs Bangladesh) ತಂಡ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಗುರುವಾರ ನಡೆಯುವ ವಿಶ್ವಕಪ್ನ 17ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ಈ ಪಂದ್ಯ ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ(Maharashtra Cricket Association Stadium) ನಡೆಯಲಿದೆ. ಪಂದ್ಯಕ್ಕೆ ಮಳೆಯ ಯಾವುದೇ ಭೀತಿ ಇರದ ಕಾರಣ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದಾಗಿದೆ.
ಎಚ್ಚರಿಕೆ ಅಗತ್ಯ
ಉಭಯ ತಂಡಗಳು ಕೂಡ ಸ್ಪಿನ್ ಪಿಚ್ನಲ್ಲಿ ಉತ್ತಮ ಪ್ರದರ್ಶನ ತೋರುವ ಕಾರಣ ಈ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ. ಭಾರತ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ, ಈ ಪಂದ್ಯವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಕ್ರಿಕೆಟ್ನಲ್ಲಿ ಏನೂ ಕೂಡ ಸಂಭವಿಸಬಹುದು ಎಂಬುದಕ್ಕೆ ಆಘ್ಘನ್ ಮತ್ತು ನೆದರ್ಲೆಂಡ್ಸ್ ತಂಡಗಳ ಗೆಲುವುವೇ ಉತ್ತಮ ನಿದರ್ಶನ. ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಈ ತಂಡಗಳು ಬಲಿಷ್ಠ ತಮಡಕ್ಕೆ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಭಾರತೀಯ ಆಟಗಾರರು ಪ್ರತಿ ಹಂತದಲ್ಲೂ ಎಚ್ಚರಿಕೆಯ ಆಟವಾಡುವುದು ಅಗತ್ಯ.
ವಿಶ್ವಕಪ್ನಲ್ಲಿ ಭಾರತ ವಿರುದ್ಧ ಬಾಂಗ್ಲಾ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಪ್ರದರ್ಶನವನ್ನೇ ತೋರಿದೆ. ಎಲ್ಲಿಯೂ ಹೀನಾಯವಾಗಿ ಸೋಲು ಕಂಡಿಲ್ಲ. ಕೊನೆಯ ವರೆಗೂ ಹೋರಾಡಿ ಸಣ್ಣ ಅಂತರದ ಸೋಲು ಕಂಡಿದೆ. ಇನ್ನು ವಿಶ್ವಕಪ್ನ ಮೊದಲ ಮುಖಾಮುಖಿಯಲ್ಲಿ ಭಾರಕ್ಕೆ ಬಾಂಗ್ಲಾ ಸೋಲಿನ ಶಾಕ್ ನೀಡಿದ್ದನ್ನು ಮರೆಯುವಂತಿಲ್ಲ. ಇದೆಲ್ಲವನ್ನು ನೆನಪಿನಲ್ಲಿಟ್ಟುಕೊಂಡು ರೋಹಿತ್ ಪಡೆ ಬಾಂಗ್ಲಾ ಹುಲಿಗಳನ್ನು ಕಟ್ಟಿಹಾಕಬೇಕಿದೆ.
ರೋಹಿತ್ ಪ್ರಚಂಡ ಫಾರ್ಮ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸಂಕಟಕ್ಕೆ ಸಿಲುಕಿದ್ದ ನಾಯಕ ರೋಹಿತ್ ಶರ್ಮ ಆ ಬಳಿಕ ಆಡಿದ ಎರಡು ಪಂದ್ಯಗಳಲ್ಲಿಯೂ ಪ್ರಚಂಡ ಬ್ಯಾಟಿಂಗ್ ನಡೆಸಿ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಆಫ್ಘನ್ ವಿರುದ್ಧ ಶತಕ ಬಾರಿಸಿದರೇ, ಪಾಕ್ ವಿರುದ್ಧ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿಯೂ ಅವರು ಬ್ಯಾಟಿಂಗ್ ಆರ್ಭಟ ವಿಸ್ತರಿಸುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಬೌಲಿಂಗ್ ಕೂಡ ನಡೆಸುವ ಸಾಧ್ಯತೆ ಇದೆ. ನೆಟ್ಸ್ನಲ್ಲಿ ಬ್ಯಾಟಿಂಗ್ಗಿಂತ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ಗಮನಿಸುವಾಗ ಒಂದೆರಡು ಓವರ್ ಬೌಲಿಂಗ್ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ IND vs BAN: ಭಾರತ-ಬಾಂಗ್ಲಾ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
ಶಾರ್ದೂಲ್ ಆಯ್ಕೆಯೇ ಗೊಂದಲ
ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಜವಾಬ್ದಾರಿಗೆ ತಕ್ಕ ಆಟವನ್ನು ಪ್ರದರ್ಶಿಸುವ ಮೂಲಕ ತಂಡಕ್ಕೆ ನೆರವಾಗುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಸದ್ಯಕ್ಕೆ ತಂಡದಲ್ಲಿರುವ ಸಮಸ್ಯೆ ಎಂದರೆ ಶಾರ್ದೂಲ್ ಠಾಕೂರ್ ಅವರ ಆಯ್ಕೆ. ಹೆಚ್ಚುವರಿ ಬ್ಯಾಟಿಂಗ್ ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಿದರೂ ಅವರಿಗೆ ಬ್ಯಾಟಿಂಗ್ ಸಿಗುತ್ತಿಲ್ಲ. ಅಲ್ಲದೆ ಬೌಲಿಂಗ್ನಲ್ಲಿಯೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೇವಲ ಒಂದೆರಡು ಓವರ್ಗೆ ಸೀಮಿತಗೊಳಿಸಲಾಗುತ್ತಿದೆ. ಇದರ ಬದಲು ಅನುಭವಿ ಮತ್ತು ಪೂರ್ಣಾವಧಿಯ ಬೌಲರ್ ಆಗಿರುವ ಮೊಹಮ್ಮದ್ ಶಮಿ ಆಯ್ಕೆ ಉತ್ತಮ ಎನ್ನಲಡ್ಡಿಯಿಲ್ಲ. ಏಕೆಂದರೆ ಅವರು 10 ಓವರ್ ಎಸೆಯಬಲ್ಲರು. ಅಲ್ಲದೆ ಹೊಸ ಚೆಂಡಿನಲ್ಲಿ ಸ್ವಿಂಗ್ ಕೂಡ ಮಾಡಬಲ್ಲರು. ಮೂಲಗಳ ಮಾಹಿತಿ ಪ್ರಕಾರ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧಯತೆ ಇದೆ.
ಬಾಂಗ್ಲಾ ಕೂಡ ಬಲಿಷ್ಠವಾಗಿದೆ
ಬಾಂಗ್ಲಾದೇಶ ಕೂಡ ಬಲಿಷ್ಠವಾಗಿದೆ. ಅನುಭವಿ ಶಕೀಬ್ ಅಲ್ ಹಸನ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಿರಿಯ ಆಲ್‌ರೌಂಡರ್ ಮೊಹಮ್ಮದುಲ್ಲ, ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ, ಯುವ ಆಟಗಾರ ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ ತಂಡದ ಬ್ಯಾಟಿಂಗ್ ಬಲವಾಗಿದೆ. ಬೌಲಿಂಗ್ನಲ್ಲಿ ಮುಸ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ ಇವರೆಲ್ಲ ಸಂಘಟಿತ ಬೌಲಿಂಗ್ ಪ್ರದರ್ಶನದ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಲು ಸಮರ್ಥರಿದ್ದಾರೆ.