ಢಾಕಾ: ಬಾಂಗ್ಲಾದೇಶ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನಾಡುತ್ತಿರುವ ಭಾರತ(IND VS BAN) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈಗಾಗಲೇ ಮೊದಲ ಪಂದ್ಯವನ್ನು ಸೋತಿರುವ ಭಾರತಕ್ಕೆ ಇದೀಗ ರೋಹಿತ್ ಅವರ ಗಾಯ ಇನ್ನಷ್ಟು ಚಿಂತೆಗೀಡು ಮಾಡಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಇನ್ನಿಂಗ್ಸ್‌ನ 1.4 ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಅನಾಮುಲ್ ಹಕ್ ನೀಡಿದ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡರು.
ಚೆಂಡು ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಬಡಿದ ಕಾರಣ ಕೈಯಿಂದ ರಕ್ತ ಸುರಿದಿದೆ. ತಕ್ಷಣವೇ ಅವರು ಮೈದಾನದಿಂದ ಹೊರನಡೆದರು. ಗಾಯದ ಸ್ವರೂಪ ತೀವ್ರವಾದ ಕಾರಣ ಸದ್ಯ ಅವರನ್ನು ಎಕ್ಸ್ರೇ ಮಾಡಿಸಲು ಆಸ್ಪತ್ರಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ರೋಹಿತ್ ಶರ್ಮಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ತಿಳಿಸಿದೆ.
ರೋಹಿತ್ ಶರ್ಮಾ ಬದಲಿಯಾಗಿ ರಜತ್ ಪಾಟಿದಾರ್ ಫೀಲ್ಡಿಂಗ್ ನಡೆಸುತ್ತಿದ್ದಾರೆ. ಅದರಂತೆ ನಾಯಕನ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಸ್ಟ್ಯಾಂಡ್ ಇನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ವೈದ್ಯರ ತಪಾಸಣೆ ನಂತರವೇ ತಂಡದ ಮ್ಯಾನೇಜ್‌ಮೆಂಟ್ ಮುಂದಿನ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಇದನ್ನೂ ಓದಿ | IND VS BAN | ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ; ಭಾರತಕ್ಕೆ ಬೌಲಿಂಗ್ ಆಹ್ವಾನ