Site icon Vistara News

IND VS BAN | ಬರೋಬ್ಬರಿ 12 ವರ್ಷಗಳ ಬಳಿಕ ಟೀಮ್​ ಇಂಡಿಯಾ ಪರ ಕಣಕ್ಕಿಳಿದ ಜೈದೇವ್​ ಉನಾದ್ಕತ್​

ban vs ind test

ಢಾಕಾ: ಪ್ರವಾಸಿ ಭಾರತ ವಿರುದ್ಧದ ದ್ವಿತೀಯ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಬಾಂಗ್ಲಾದೇಶ(IND VS BAN) ಮೊದಲು ಬ್ಯಾಟಿಂಗ್​ ನಡೆಸುವ ನಿರ್ಧಾರ ಕೈಗೊಂಡಿದೆ. ಈ ಪಂದ್ಯ ಢಾಕಾ ಶೇರ್​ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಅಚ್ಚರಿ ಎಂಬಂತೆ ಕಳೆದ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ದಾಳಿ ನಡೆಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಚೈನಾಮನ್ ಸ್ಪಿನ್ನರ್​​ ಕುಲ್​ದೀಪ್ ಯಾದವ್​​ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿದೆ. ಇವರ ಬದಲು ಸೌರಾಷ್ಟ್ರದ ಎಡಗೈ ವೇಗಿ ಜೈದೇವ್​ ಉನಾದ್ಕತ್​ಗೆ ಆಡುವ ಅವಕಾಶ ನೀಡಲಾಗಿದೆ. ವಿಶೇಷ ಎಂದರೆ ಉನಾದ್ಕತ್​ ಬರೋಬ್ಬರಿ 12 ವರ್ಷಗಳ ಬಳಿಕ ಟೀಮ್​ ಇಂಡಿಯಾ ಪರ ಕಣಕ್ಕಿಳಿದಿದ್ದಾರೆ. ಭಾರತ ತಂಡದ ಪರ ಇವರು 2010ರಲ್ಲಿ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದರು.

ಇನ್ನೊಂದೆಡೆ ಬಾಂಗ್ಲಾದೇಶ ಕೂಡ ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಎರಡು ಬದಲಾವಣೆ ಮಾಡಿದೆ. ಯಾಸಿರ್‌ ಅಲಿ ಸ್ಥಾನಕ್ಕೆ ಮೊಮಿನುಲ್ ಹಕ್ ಹಾಗೂ ಇಬಾದತ್‌ ಹುಸೇನ್‌ ಸ್ಥಾನಕ್ಕೆ ತಾಸ್ಕಿನ್‌ ಅಹ್ಮದ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಲಾಗಿದೆ.

ಸದ್ಯ ಬ್ಯಾಟಿಂಗ್​ ನಡೆಸುತ್ತಿರುವ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೆ 20 ರನ್ ಗಳಿಸಿ ಆಟ ಮುಂದುವರಿಸಿದೆ.

​ಇದನ್ನೂ ಓದಿ | IND VS BAN | ಡಾನ್​ ಬ್ರಾಡ್​ಮನ್​ ದಾಖಲೆ ಮುರಿಯುವ ಸನಿಹದಲ್ಲಿ ಚೇತೇಶ್ವರ್​ ಪೂಜಾರ!

Exit mobile version