Site icon Vistara News

IND VS BAN | ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಕೆ.ಎಲ್​. ರಾಹುಲ್​ ನಾಯಕ?

kl rahul IND VS BAN

ಢಾಕಾ: ಭಾರತ ಹಾಗೂ ಬಾಂಗ್ಲಾದೇಶ(IND VS BAN) ನಡುವಿನ ಏಕ ದಿನ ಸರಣಿಯ ಅಂತಿಮ ಪಂದ್ಯ ಶನಿವಾರ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಏಕ ದಿನ ಸರಣಿಯನ್ನು ಕಳೆದುಕೊಂಡಿರುವ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ.

ತಂಡದ ಖಾಯಂ ನಾಯಕ ರೋಹಿತ್​ ಶರ್ಮಾ ದ್ವಿತೀಯ ಏಕದಿನ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಅಂತಿಮ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಜತೆಗೆ ಟೆಸ್ಟ್ ಸರಣಿಗೆ ಅಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆ ಕನ್ನಡಿಗ ರಾಹುಲ್​ ಟೆಸ್ಟ್​ ಸರಣಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಮೂಲವೊಂದು ಮಾಹಿತಿ ನೀಡಿದೆ.

ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಲಭ್ಯವಾಗುವ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೂರನೇ ಏಕದಿನ ಪಂದ್ಯಕ್ಕೂ ಮುನ್ನವೇ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್ ಶರ್ಮಾ ತವರಿಗೆ ಮರಳಲಿದ್ದಾರೆ ಎಂಬ ಸುಳಿವು ನೀಡಿದ್ದರು. ಹೀಗಾಗಿ ಟೆಸ್ಟ್ ಸರಣಿಗೆ ರೋಹಿತ್ ಲಭ್ಯವಾಗುವ ಸಾಧ್ಯತೆ ಕಡಿಮೆಯಿದೆ. ಈ ಹಿನ್ನೆಲೆ ಉಪ ನಾಯಕನಾಗಿರುವ ಕೆ.ಎಲ್. ರಾಹುಲ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಅಂತಿಮ ಏಕ ದಿನ ಪಂದ್ಯಕ್ಕೂ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್​ ಬದಲಿಗೆ ಅಭಿಮನ್ಯು?

ಗಾಯಾಳು ರೋಹಿತ್‌ ಶರ್ಮಾ ಬದಲಿಗೆ ಭಾರತ “ಎ” ತಂಡದ ನಾಯಕ ಅಭಿಮನ್ಯು ಈಶ್ವರನ್​ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ ಎಂದು ಗುರುವಾರ ಬಿಸಿಸಿಐ ಮೂಲವೊಂದು ಮಾಹಿತಿ ನೀಡಿತ್ತು. ಅಭಿಮನ್ಯು ಈಶ್ವರನ್ ಬಾಂಗ್ಲಾದೇಶ “ಎ” ವಿರುದ್ಧದ ಅನಧಿಕೃತ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಆದರೆ ರೋಹಿತ್​ ಟೆಸ್ಟ್​ ಸರಣಿಗೆ ಅಲಭ್ಯರಾಗುವ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ | IND VS BAN | ಭಾರತ ವಿರುದ್ಧದ ಟೆಸ್ಟ್​ ಸರಣಿಗೆ 17 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ

Exit mobile version